Saturday, November 1, 2025

ವೃಶ್ಚಿಕ ಏಕಾದಶಿಯಂದೇ ಗುರುವಾಯೂರು ದೇಗುಲದಲ್ಲಿ ಉದಯಸ್ತಮಾನ ಪೂಜೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ನಡೆಯುವ ಉದಯಾಸ್ತಮಾನ ಪೂಜೆಯ ಸಮಯ ಬದಲಾವಣೆ ಚರ್ಚೆ ಇದೀಗ ಸುಪ್ರೀಂಕೋರ್ಟ್‌ ಅಂಗಳದಲ್ಲಿದ್ದು, ಇದೀಗ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ಗುರುವಾಯೂರು ದೇವಸ್ಥಾನದಲ್ಲಿ ನಡೆಯುವ ಉದಯಾಸ್ತಮಾನ ಪೂಜೆಯ ಸಮಯವನ್ನು ತಂತ್ರಿಗಳು ಬದಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಉದಯಾಸ್ತಮಾನ ಪೂಜೆಯನ್ನು ವೃಶ್ಚಿಕ ಏಕಾದಶಿಯ ದಿನದಂದೇ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ದೇವರ ಆಧ್ಯಾತ್ಮಿಕ ಶಕ್ತಿಯನ್ನು (ಚೈತನ್ಯಂ) ಹೆಚ್ಚಿಸುವುದು ತಂತ್ರಿಗಳ (ಮುಖ್ಯ ಅರ್ಚಕರ) ಕರ್ತವ್ಯವಾಗಿದ್ದು, ಭಕ್ತರ ಅನುಕೂಲಕ್ಕಾಗಿ ತಂತ್ರಿಗಳು ಆಚರಣೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದ್ದು, ದೇವರ ಆಧ್ಯಾತ್ಮಿಕ ಶಕ್ತಿ ಕಡಿಮೆಯಾದರೆ, ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಕಡಿಮೆಯಾಗಬಹುದು ಎಂದು ಹೇಳಿದೆ.

ಈ ವರ್ಷ, ವೃಶ್ಚಿಕ ಏಕಾದಶಿ ಡಿಸೆಂಬರ್ 1 ರಂದು ಬರುತ್ತದೆ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದ ಮೂಲಕ ಉದಯಸ್ಥಮಾನ ಪೂಜೆಯನ್ನು ಆ ದಿನದಂದೇ ನಡೆಸಬೇಕೆಂದು ನಿರ್ದೇಶಿಸಿದೆ.

ಈ ಹಿಂದೆ, ತುಲಾ ಏಕಾದಶಿಗೆ ಅನುಗುಣವಾಗಿ ನವೆಂಬರ್ 2 ರಂದು ಆಚರಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ ದೇಗುಲದ ತಂತ್ರಿ ಅದೇ ಸೂಕ್ತವೆಂದು ಭಾವಿಸಿದರೆ, ವೃಶ್ಚಿಕ ಏಕಾದಶಿಯ ಜೊತೆಗೆ ತುಲಾ ಏಕಾದಶಿಯಂದೇ ಉದಯಸ್ಥಮಾನ ಪೂಜೆಯನ್ನು ಸಹ ನಡೆಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವೃಶ್ಚಿಕ ಮಾಸದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ, ತುಲಂ ಏಕಾದಶಿಗೆ ಆಚರಣೆಯನ್ನು ಬದಲಾಯಿಸುವ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಲಾಗಿತ್ತು. ಗುರುವಾಯೂರ್ ದೇವಸ್ವಂ ಮಂಡಳಿಯ ಕೋರಿಕೆಯ ಮೇರೆಗೆ, ತಂತ್ರಿ ದೈವಿಕ ಮಾರ್ಗದರ್ಶನ ಪಡೆದು ಬದಲಾವಣೆಗೆ ಅನುಮತಿ ನೀಡಿದ್ದರು.

ದೇಗುಲದ ತಂತ್ರಿ ಪರವಾಗಿ ಹಾಜರಾದ ಹಿರಿಯ ವಕೀಲ ವಿ. ಗಿರಿ, ಸಂಪ್ರದಾಯದ ಪ್ರಕಾರ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಸರಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಗುರುವಾಯೂರು ದೇವಸ್ವಂ ಮಂಡಳಿಯು ದೇಗುಲದಲ್ಲಿ ನಡೆಯುವ ಉದಯಸ್ತಮಾನ ಪೂಜೆಯು ದೈನಂದಿನ ಆಚರಣೆಯಲ್ಲ, ಬದಲಾಗಿ ಅದು ನೈವೇದ್ಯ (ವಾಳಿಪಾಡು) ಕಾಣಿಕೆ ಎಂಬ ನಿಲುವು ಹೊಂದಿತ್ತು.

ದೇಗುಲ ಮಂಡಳಿಯ ಪರವಾಗಿ ಹಾಜರಾದ ಹಿರಿಯ ವಕೀಲರಾದ ಆರ್ಯಮ ಸುಂದರಂ ಮತ್ತು ಎಂ.ಎಲ್. ಜಿಷ್ಣು, ದೇವಾಲಯದ ಆಚರಣೆಗಳ ಬಗ್ಗೆ ಅಂತಿಮ ನಿರ್ಧಾರವು ತಂತ್ರಿಯದ್ದೇ ಆಗಿದ್ದು, ಅವರ ಒಪ್ಪಿಗೆಯ ಮೇರೆಗೆ ಈ ಆಚರಣೆಯನ್ನು ಮರು ನಿಗದಿಪಡಿಸಲಾಗಿದೆ ಎಂದು ವಾದಿಸಿದರು.

ಆದರೆ, ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರಾದ ಸಿ ಎಸ್ ವೈದ್ಯನಾಥನ್, ಕೆ ಪರಮೇಶ್ವರ್, ಗುರು ಕೃಷ್ಣಕುಮಾರ್ ಮತ್ತು ವಕೀಲ ಎ ಕಾರ್ತಿಕ್ ಅವರು, ಉದಯಸ್ತಮಾನ ಪೂಜೆಯು ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಆಚರಣೆಯಾಗಿದ್ದು, ತಂತ್ರಿ ಅದನ್ನು ಏಕಪಕ್ಷೀಯವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಈ ಪ್ರಕರಣಗಳ ವಿಚಾರಣೆಯನ್ನು ತಾವು ಆಲಿಸುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಅವರು ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದ್ದಾಗಾಗಿ ಹೇಳಿದ್ದಾರೆ. ತಮ್ಮ ಸ್ನೇಹಿತ ಮತ್ತು ಸಹ ನ್ಯಾಯಾಧೀಶ ಸಿ ಟಿ ರವಿಕುಮಾರ್ ಅವರ ಮಗಳ ಮದುವೆಯಲ್ಲಿ ಭಾಗವಹಿಸಲು ಕೇರಳದಲ್ಲಿದ್ದರೂ ದೇವಸ್ಥಾನಕ್ಕೆ ಸಂಬಂಧಿಸಿದ ಅರ್ಜಿಗಳು ತಮ್ಮ ಪೀಠದ ಮುಂದೆ ಇದ್ದುದರಿಂದ, ತಾವು ದೇಗುಲಕ್ಕೆ ಭೇಟಿ ನೀಡದಿರಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ.

error: Content is protected !!