ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮನಾಲಿ ಸಮೀಪದ ಮಾಥುರ್ ಎಂಎಂಡಿಎಯಲ್ಲಿ ಮನೆಯೊಂದರಲ್ಲಿ ಸೊಳ್ಳೆ ನಿವಾರಕ ರಿಪಲೆಂಟ್ನಿಂದ ಉಂಟಾದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಉಸಿರುಗಟ್ಟಿ ವೃದ್ಧೆ ಹಾಗೂ ಆಕೆಯ ಮೂವರು ಮೊಮ್ಮಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಸಂತಾನಲಕ್ಷ್ಮಿ(65) , ಆಕೆಯ ಮೊಮ್ಮಗಳಾದ ಸಂಧ್ಯಾ, ಪ್ರಿಯಾ ರಕ್ಷಿತಾ ಮತ್ತು ಪವಿತ್ರಾ ಎಂದು ಗುರುತಿಸಲಾಗಿದೆ. 8 ರಿಂದ 10 ವರ್ಷದ ಈ ಮೂವರು ಬಾಲಕಿಯರು ಬೆಂಕಿ ಹೊತ್ತಿಕೊಂಡಾಗ ತಮ್ಮ ಮನೆಯಲ್ಲಿ ಮಲಗಿದ್ದರು.
ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು , ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಲ್ವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಎಲೆಕ್ಟ್ರಿಕ್ ಸೊಳ್ಳೆ ನಿವಾರಕ ರಿಪಲೆಂಟ್ಗೆ ಏಕಾಏಕಿ ಬೆಂಕಿ ತಗುಲಿದೆ. ಇದರಿಂದ ಕೆಳಗಿದ್ದ ರಟ್ಟಿನ ಪೆಟ್ಟಿಗೆ ಬೆಂಕಿ ತಾಗಿ ನಂತರ ಇಡೀ ಮನೆ ತುಂಬಾ ದಟ್ಟ ಹೊಗೆ ಆವರಿಸಿದೆ. ಹೀಗಾಗಿ ಉಸಿರುಗಟ್ಟಿ ನಾಲ್ವರೂ ಸಹ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.