Most Wanted ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಗಡೀಪಾರು! ಪ್ರಕ್ರಿಯೆ ಶುರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬ್‌ನಲ್ಲಿ ನಡೆದ ಕನಿಷ್ಠ 16 ಭಯೋತ್ಪಾದಕ ದಾಳಿಗಳಿಗೆ ಹೊಣೆಗಾರನಾಗಿದ್ದ ಖಲಿಸ್ತಾನಿ ಉಗ್ರ ಹ್ಯಾಪಿ ಪಾಸಿಯಾ ವಿರುದ್ಧ ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಅಮೆರಿಕದ ಭದ್ರತಾ ಸಂಸ್ಥೆಗಳ ವಶದಲ್ಲಿರುವ ಪಾಸಿಯಾನನ್ನು ಭಾರತಕ್ಕೆ ಕರೆತರುವ ನಿಗದಿತ ಪ್ರಕ್ರಿಯೆಗಳು ಈಗ ತೀವ್ರವಾಗಿ ನಡೆಯುತ್ತಿದ್ದು, ದ್ವಿಪಕ್ಷೀಯ ರಾಜತಾಂತ್ರಿಕ ಹಾಗೂ ಕಾನೂನಾತ್ಮಕ ಮಾತುಕತೆಗಳು ಆರಂಭವಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

2016-17ರ ಅವಧಿಯಲ್ಲಿ ಪಂಜಾಬ್‌ನ ಗುರ್ದಾಸ್‌ಪುರ, ದಿನಾನಗರ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ನಡೆದ ಗ್ರೆನೇಡ್ ದಾಳಿ ಹಾಗೂ ಬಾಂಬ್ ಸ್ಫೋಟಗಳ ಹಿಂದೆ ಪಾಸಿಯಾ ಕೈವಾಡವಿದೆ ಎಂದು ತನಿಖೆಯಿಂದ ಬಯಲಾಗಿದೆ. ಈತನ ವಿರುದ್ಧ ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪಾರ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಪಟ್ಟ ಪ್ರಕರಣಗಳು ದಾಖಲಾಗಿವೆ. ಇನ್ನು ಇಂಟರ್‌ಪೋಲ್ ಕೂಡ ಈತನ ಮೇಲೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದರಿಂದ ಈತನ ಮೇಲಿನ ತೀವ್ರ ನಿಗಾವಿದೆ.

ಪಾಕಿಸ್ತಾನದ ಭದ್ರತಾ ಸಂಸ್ಥೆ ISI ಹಾಗೂ ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್ (BKI) ಸಂಘಟನೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಪಾಸಿಯಾ, ಭಾರತದ ಒಳಭದ್ರತೆಗೆ ಮಾರಕ ಎನಿಸಿದ ವ್ಯಕ್ತಿ. ಈತನನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮತ್ತು ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ತಂಡಗಳು ಕಳೆದ ಏಪ್ರಿಲ್ 18ರಂದು ಬಂಧಿಸಿವೆ ಎಂಬ ಮಾಹಿತಿ ಪ್ರಕಟವಾಗಿದ್ದು, ತೀವ್ರ ಭದ್ರತಾ ಕ್ರಮದ ನಡುವೆ ತನಿಖೆ ಮುಂದಾಗಿದೆ.

ಈಗಾಗಲೇ ಅಮೆರಿಕದ ಕಾನೂನಾತ್ಮಕ ವ್ಯವಸ್ಥೆಯ ಪ್ರಕಾರ, ಭಾರತ ಹಸ್ತಾಂತರ ಮನವಿಯನ್ನು ಸಲ್ಲಿಸಿರುವುದಾಗಿ ತಿಳಿದುಬಂದಿದ್ದು, ಭಾರತ-ಅಮೆರಿಕ ನಡುವೆ ಇರುವ ಗಡೀಪಾರು ಒಪ್ಪಂದದ ಅಡಿಯಲ್ಲಿ ಈ ಕಾರ್ಯಾಚರಣೆಗೆ ಚಾಲನೆ ಸಿಕ್ಕಿದೆ. ಹೀಗಾಗಿ ಹ್ಯಾಪಿ ಪಾಸಿಯಾನನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರುವ ಸಾಧ್ಯತೆ ಹೆಚ್ಚಾಗಿದೆ.

ಭದ್ರತಾ ಕ್ಷೇತ್ರದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, “ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಈ ಬೆಳವಣಿಗೆ ಮಹತ್ವಪೂರ್ಣ ಹೆಜ್ಜೆಯಾಗಿದೆ. ದೇಶದ ಭದ್ರತೆಯನ್ನು ಭಂಗಪಡಿಸಲು ಹೊರಟವರನ್ನು ನ್ಯಾಯದ ಮುಂದೆ ತರಬೇಕು ಎಂಬ ಸಂಕಲ್ಪಕ್ಕೆ ಇದು ಸಾಕ್ಷ್ಯ ಎಂದರು”

ಭಾರತಕ್ಕೆ ಪಾಸಿಯಾನನ್ನು ಹಸ್ತಾಂತರಿಸುವ ಕಾರ್ಯ ಯಶಸ್ವಿಯಾದರೆ, ಇದು ಭದ್ರತಾ ಸಂಸ್ಥೆಗಳ ಪ್ರಮುಖ ಸಾಧನೆಯಾಗಲಿದೆ. ಅಲ್ಲದೇ, ಖಲಿಸ್ತಾನಿ ಉಗ್ರ ಸಂಘಟನೆಗಳಿಗೆ ತೀವ್ರ ಸಂದೇಶವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!