ಹೊಸದಿಗಂತ ವರದಿ, ವಿಜಯನಗರ
ಕೊಟ್ಟೂರಿನಲ್ಲಿ ಸುರಿದ ಬಿರುಸಿನ ಮಳೆ ಮಧ್ಯೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ತುಂಬಿ ಹರಿಯುತ್ತಿದ್ದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಬೇಕಿದ್ದ ತಾಯಿ ಮತ್ತು ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಟ್ಟೂರಿನಲ್ಲಿ ಬುಧವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಪಟ್ಟಣದ ಬಹುತೇಕ ಚರಂಡಿಗಳು ತುಂಬಿ, ಮಳೆ ನೀರು ರಸ್ತೆ ಹರಿದಿದೆ. ಕೊಟ್ಟೂರು ಬಸ್ ನಿಲ್ದಾಣ ಮುಂಭಾಗದಲ್ಲಿ ಹಾದು ಹೋಗವು ರಾಜಕಾಲುವೆ ಉಕ್ಕಿ ಹರಿದಿದ್ದರಿಂದ ಮಳೆ ನೀರು ಬಸ್ ನಿಲ್ದಾಣಕ್ಕೆ ನುಗ್ಗಿದ್ದರಿಂದ ಬಸ್ ಸ್ಟಾಂಡ್ ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ ನಿಲ್ದಾಣದ ಮುಂಭಾಗದಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದರಿಂದ ಚರಂಡಿ ಹಾಗೂ ರಸ್ತೆ ಯಾವುದು ಎಂಬುದನ್ನು ಗುರುತು ಸಿಗುತ್ತಿರಲಿಲ್ಲ.
ಇದೇ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ತಾಯಿ ಮತ್ತು ಮಗ ಕಾಲು ಜಾರಿ ಬಿದ್ದಿದ್ದಾರೆ. ಚರಂಡಿಯಲ್ಲಿ ಕಾಲಿರಿಸಿದ್ದ ಮಗು ಕೊಚ್ಚಿ ಹೋಗುವುದನ್ನು ಅರಿತ ತಾಯಿ, ತನ್ನಕೈಯಲ್ಲಿದ್ದ ಲಗೇಜು ಬಿಟ್ಟು, ಮಗುವನ್ನು ಎತ್ತಿಕೊಳ್ಳುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ. ಇದನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ರಾಜಕಾಲುವೆಯನ್ನು ಸ್ವಚ್ಛಗೊಳಿಸದ ಹಾಗೂ ಸಾರ್ವಜನಿಕರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.