ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಆರೋಗ್ಯ ಸಮಸ್ಯೆಯಿಂದ ಬಾಣಂತಿಯೋರ್ವರ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು, ಆ ದುಃಖದ ನಡುವೆಯೂ ಪತಿ ತನ್ನ ಪತ್ನಿಯ ಅಂಗಾಂಗಗಳನ್ನು ದಾನ ಮಾಡಿ ನಾಲ್ವರಿಗೆ ಹೊಸ ಜೀವ ನೀಡಿದ್ದಾರೆ.
2018ರಲ್ಲಿ ತೆಲಂಗಾಣದ ಜಂಕಾಪುರದ ಗುಂಡು ನಾಗರಾಜು ಅವರು ಮಂದಮರ್ರಿಯ ಮೂಲದ ಈಸ್ತಾ ಸೃಜನಾ (34) ಅವರನ್ನು ವಿವಾಹವಾಗಿದ್ದರು. ಇವರಿಗೆ ಐದು ವರ್ಷದ ಮಗ ಅದ್ವಿಕ್ ಇದ್ದಾನೆ.
ಕಳೆದ ಮೂರು ವರ್ಷಗಳಿಂದ ದಂಪತಿ ಕೆಲಸದ ಹಿನ್ನೆಲೆಯಲ್ಲಿ ದುಬೈನಲ್ಲಿ ವಾಸಿಸುತ್ತಿದ್ದರು. ಗರ್ಭಿಣಿಯಾಗಿದ್ದ ಸೃಜನಾ ಹೆರಿಗೆಗಾಗಿ ಮಂದಮರ್ರಿಯ ತನ್ನ ತಾಯಿ ಮನೆಗೆ ಮರಳಿದ್ದರು. 23 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪತಿ ಕೂಡ ಈ ಸಂಭ್ರಮಕ್ಕೆ ಜೊತೆಯಾಗಲು ದುಬೈನಿಂದ ಊರಿಗೆ ಬಂದು ಕುಟುಂಬದೊಂದಿಗೆ 11 ದಿನ ಕಳೆದಿದ್ದರು. ಇಲ್ಲಿವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಹಠಾತ್ ಆರೋಗ್ಯ ಬಿಕ್ಕಟ್ಟು ಕುಟುಂಬವನ್ನೇ ಆಘಾತಕ್ಕೆ ದೂಡಿದೆ.
ತಾಯಿಯ ಮನೆಯಲ್ಲಿದ್ದ ಸೃಜನಾ ತೀವ್ರ ತಲೆನೋವಿನಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅವರನ್ನು ಮಂಚೇರಿಯಲ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರಿಸ್ಥಿತಿ ಹದಗೆಟ್ಟಾಗ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಐದು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ವೈದ್ಯರು ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ದೃಢಪಡಿಸಿದರು.
ಈ ವೇಳೆ ಪತಿ ನಾಗರಾಜು ದಿಟ್ಟ ನಿರ್ಧಾರ ತೆಗೆದುಕೊಂಡು ಪತ್ನಿಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡರು. ಅವರ ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಹೊರತೆಗೆದು ಕಸಿ ಮಾಡಲಾಯಿತು. ಇದರಿಂದ ನಾಲ್ಕು ಗಂಭೀರ ಅನಾರೋಗ್ಯಪೀಡಿತ ರೋಗಿಗಳಿಗೆ ಹೊಸ ಜೀವ ಸಿಕ್ಕಿದೆ.



