ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗು ಮಲಗಿದೆ ಬಿಡು ಎಂದು ತಾಯಿ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದರೆ, ಇತ್ತ ಕಂದಮ್ಮ ಹಾಸಿಗೆಯಲ್ಲಿಯೇ ಕೊನೆಯುಸಿರೆಳೆದಿದೆ.
ಹೌದು, ಕಡಬ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಯ ಎರಡೂವರೆ ವರ್ಷದ ಕಂದಮ್ಮ ಮಲಗಿದ್ದ ಜಾಗದಲ್ಲಿಯೇ ಮೃತಪಟ್ಟಿದೆ.
ಉತ್ತರ ಪ್ರದೇಶದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ದಂಪತಿ ಕೊಣಾಜೆಯ ಮಾಲ ಎಂಬಲ್ಲಿಗೆ ಬಂದು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 25ರಂದು ಮಧ್ಯಾಹ್ನದ ವೇಳೆ ಮಗುವಿಗೆ ಊಟ ಕೊಟ್ಟು, ಬಳಿಕ ನಿದ್ದೆ ಬಂದ ಕಾರಣ ಮಲಗಿಸಿದ್ದರು. ಬಳಿಕ ಎಬ್ಬಿಸಿದಾಗ ಮಗು ಏಳದ ಕಾರಣ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಮಗುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕೂಡಲೇ, ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯೂ ವೈದ್ಯರು ಮಗುವನ್ನು ಪರೀಕ್ಷಿಸಿ, ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಮಗು ಆಹಾರ ಗಂಟಲಲ್ಲಿ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ರಿಪೋರ್ಟ್ ಬಂದ ನಂತರ ಸಾವಿಗೆ ಕಾರಣ ತಿಳಿಯಲಿದೆ.