ಛಲವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಿ ಯಶಸ್ಸು ಗಳಿಸಬಹುದು ಎಂಬುದಕ್ಕೆ ಭಾರತದ ಪ್ಯಾರಾ ಅಥ್ಲೀಟ್ ಶರ್ಮಿಳಾ ಧನ್ಕರ್ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಶಾಟ್‌ಪುಟ್ F57 ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶರ್ಮಿಳಾ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಹೆಸರು ಬರೆದಿದ್ದಾರೆ.
ಈ ಮೂಲಕ ಕಾಮನ್‌ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಐತಿಹಾಸಿಕ ಚಿನ್ನ ತಂದುಕೊಟ್ಟ ಹಿರಿಮೆ ಇವರದ್ದಾಗಿದೆ.
ಕಣ್ಣೀರಿನ ಕಥೆ, ದೌರ್ಜನ್ಯ ಮೆಟ್ಟಿನಿಂತ ಛಲ
ಆಗಸ್ಟ್ 15, 1986 ರಂದು ಹರಿಯಾಣದ ಮಹೇಂದ್ರಗಢ ಜಿಲ್ಲೆಯ ಚಿತ್ರೌಲಿ ಗ್ರಾಮದಲ್ಲಿ ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಶರ್ಮಿಳಾ, ಕೇವಲ ಎರಡು ವರ್ಷದ ಮಗುವಾಗಿದ್ದಾಗ ಪೋಲಿಯೋ ರೋಗಕ್ಕೆ ತುತ್ತಾಗಿ ಒಂದು ಕಾಲಿನ ಸ್ವಾಧೀನ ಕಳೆದುಕೊಂಡ ಶರ್ಮಿಳಾ ಬದುಕು ಸುಲಭವಾಗಿರಲಿಲ್ಲ. 19ನೇ ವಯಸ್ಸಿನಲ್ಲಿ ವಿವಾಹವಾದ ಇವರು ಮೊದಲ ಪತಿಯಿಂದ ತೀವ್ರವಾದ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸಿದರು. ಕೊನೆಗೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಿಂದ ಹೊರಹಾಕಲ್ಪಟ್ಟಾಗ, ಕೇವಲ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಏನಾದರೂ ಸಾಧಿಸಲೇಬೇಕು ಎಂಬ ಹಠ ಇವರಲ್ಲಿ ಮೂಡಿತು.
ನಂತರ ಅಜಿತ್ ಸಿಂಗ್‌ರೊಂದಿಗೆ ಎರಡನೇ ವಿವಾಹವಾದ ಶರ್ಮಿಳಾ, ಪತಿಯ ಪ್ರೋತ್ಸಾಹದಿಂದಾಗಿ ತಮ್ಮ 34ನೇ ವಯಸ್ಸಿನಲ್ಲಿ ಕೋಚ್ ತೆಕ್ ಚಂದ್ ಬಳಿ ಶಾಟ್‌ಪುಟ್ ತರಬೇತಿ ಆರಂಭಿಸಿದರು. ತರಬೇತಿಯ ವೆಚ್ಚವನ್ನು ಭರಿಸಲು ಸ್ವಂತ ಮನೆಯನ್ನೇ ಮಾರಿ, ಬಾಡಿಗೆ ಮನೆಗೆ ಹೋದಾಗಲೂ ಇವರು ಧೃತಿಗೆಡಲಿಲ್ಲ.
9.81 ಮೀಟರ್ ದೂರದ ಐತಿಹಾಸಿಕ ಎಸೆತ
ಮಹಿಳೆಯರ ಶಾಟ್‌ಪುಟ್ F57 ಫೈನಲ್ ಪಂದ್ಯದಲ್ಲಿ ಶರ್ಮಿಳಾ ಧನ್ಕರ್ ಅವರು 9.81 ಮೀಟರ್ ದೂರ ಎಸೆಯುವ ಮೂಲಕ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡರು. ಈ ಐತಿಹಾಸಿಕ ವಿಜಯವು ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತ ಅನುಭವಿಸುತ್ತಿದ್ದ 20 ವರ್ಷಗಳ ಪದಕದ ಬರವನ್ನು ನೀಗಿಸಿದೆ.
ಇದೇ ಸ್ಪರ್ಧೆಯಲ್ಲಿ ಮತ್ತೊಬ್ಬ ಭಾರತೀಯ ಅಥ್ಲೀಟ್ ಶಿಲ್ಪಾ ಶೈಲಾ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಒಂದೇ ವೇದಿಕೆಯಲ್ಲಿ ‘ಡಬಲ್ ಪೋಡಿಯಂ’ ಹರ್ಷ ತಂದುಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಶರ್ಮಿಳಾ ಧನ್ಕರ್ ಈ ಅದ್ಭುತ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. “ದೈಹಿಕ ಸವಾಲುಗಳು ಮತ್ತು ಕೌಟುಂಬಿಕ ಕಷ್ಟಗಳ ನಡುವೆಯೂ ಶರ್ಮಿಳಾ ಸಾಧಿಸಿದ ಈ ಜಯ ದೇಶದ ಕೋಟ್ಯಂತರ ಮಹಿಳೆಯರಿಗೆ ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ನಿರಂತರ ಪ್ರೇರಣೆಯಾಗಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ.
ದೈಹಿಕ ದೌರ್ಬಲ್ಯ ಮತ್ತು ಸಾಮಾಜಿಕ ಸವಾಲುಗಳನ್ನು ಮೀರಿ ನಿಂತು, ಕೇವಲ ಮಕ್ಕಳ ಒಳಿತಿಗಾಗಿ ಕ್ರೀಡಾಂಗಣಕ್ಕಿಳಿದು ಇಂದು ವಿಶ್ವದ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಶರ್ಮಿಳಾ ಸಾಧನೆ ಇಡೀ ಭಾರತ ಹೆಮ್ಮೆ ಪಡುವಂತೆ ಮಾಡಿದೆ.



