January16, 2026
Friday, January 16, 2026
spot_img

SHOCKING | ಅಫೇರ್‌ಗೆ ಮಗು ಅಡ್ಡಿಯೆಂದು ಕುತ್ತಿಗೆ ಹಿಸುಕಿ ಕೊಂದ ತಾಯಿ!

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಉಸಿರುಗಟ್ಟಿಸಿ ತಾಯಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಮಗುವನ್ನು ಪ್ರಿಯಾಂಕಾ (4) ಎಂದು ಗುರುತಿಸಲಾಗಿದೆ. ರಾಣೇಬೆನ್ನೂರು ನಗರದ ಎಕೆಜಿ ಕಾಲನಿ ಗಂಗಮ್ಮ ಗುತ್ತಲ (36) ಹಾಗೂ ಗೌರಿಶಂಕರ ನಗರದ ಅಣ್ಣಪ್ಪ ಮಡಿವಾಳರ (40) ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಹೀಗಾಗಿ ಆರೋಪಿ ಗಂಗಮ್ಮ ಎರಡು ತಿಂಗಳ ಹಿಂದೆ ತನ್ನ ಪತಿಯನ್ನು ಬಿಟ್ಟು, ಮಗಳನ್ನು ಕರೆದುಕೊಂಡು ಅಣ್ಣಪ್ಪನ ಜೊತೆ ಗುಡ್ಡದ ಆನ್ವೇರಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಈ ನಡುವೆ ತಮ್ಮ ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಿದ್ದಾಳೆಂದು ಭಾವಿಸಿ, ಆಕೆಯ ಕೊಲೆಗೆ ಸಂಚು ರೂಪಿಸಿದ್ದರು.

ಅದರಂತೆ ಆ.5ರಂದು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಹಾವೇರಿ ತಾಲೂಕಿನ ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಬಳಿ ಸುಟ್ಟು ಹಾಕಲು ಪ್ರಯತ್ನಿಸಿದ್ದರು. ನಂತರ ಬಾಲಕಿಯ ಅರ್ಧದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗುತ್ತಲ ಠಾಣೆ ಪೊಲೀಸರು ಬಾಲಕಿಯನ್ನು ಅಪರಿಚಿತ ಶವ ಎಂದು ಪರಿಗಣಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಇದೆಲ್ಲ ನಡೆದ ಸ್ವಲ್ಪ ದಿನಗಳ ಬಳಿಕ ಆರೋಪಿ ಗಂಗಮ್ಮಳ ಪತಿ ಮಂಜುನಾಥ ಮಗುವನ್ನು ನೀಡುವಂತೆ ಬೇಡಿಕೊಂಡಿದ್ದನು. ನೀನು ಅವನ ಜೊತೆಗೆ ಇರು, ಆದರೆ ನನ್ನ ಮಗಳನ್ನು ನನಗೆ ಕೊಟ್ಟುಬಿಡು ಎಂದು ಪಟ್ಟುಹಿಡಿದ್ದಿದ್ದ. ಆಗ ಗಂಗಮ್ಮ ಮಗಳು ಮೈಸೂರಿನಲ್ಲಿದ್ದಾಳೆ, ಅವಳಿಗೆ ಹುಷಾರಿಲ್ಲ, ಆಸ್ಪತ್ರೆಯಲ್ಲಿದ್ದಾಳೆ ಎಂದು ಕಥೆ ಕಟ್ಟಿ, ಒಂದು ತಿಂಗಳು ಕಾಲಕಳೆದಿದ್ದಳು.

ಇದರಿಂದ ಬೇಸತ್ತ ಪತಿ ಮಂಜುನಾಥ ಮಗಳನ್ನು ಕೊಡಿಸುವಂತೆ ಶಹರ ಠಾಣೆ ಪಿಎಸ್‌ಐ ಗಡ್ಡಪ್ಪ ಗುಂಜುಟಗಿ ಮೊರೆ ಹೋಗಿದ್ದಾನೆ. ಆಗ ಪಿಎಸ್‌ಐ ಮಗಳ ವಿಚಾರವಾದರೆ ಕೂಡಲೇ ಬಗೆಹರಿಸುವೆ ಎಂದು ಗಂಗಮ್ಮ ಮತ್ತು ಅಣ್ಣಪ್ಪನನ್ನು ಕರೆತಂದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Must Read

error: Content is protected !!