July 12, 2026
Sunday, July 12, 2026
spot_img

‘ಮೈಸೂರಲ್ಲೇ ಪ್ರಾಣ ಬಿಡಬೇಕು ಅಂದಿದ್ರು ಅಮ್ಮ’: ಎಸ್.ಜಾನಕಿ ಅಂತಿಮ ದಿನಗಳ ರಹಸ್ಯ ಬಿಚ್ಚಿಟ್ಟ ಸಾಕುಮಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರು ಮೈಸೂರಿನಲ್ಲಿ ನಿಧನರಾಗಿದ್ದು, ಅವರ ಅಂತಿಮ ಸಂಸ್ಕಾರವು ಸಾಂಸ್ಕೃತಿಕ ನಗರಿಯಲ್ಲೇ ನೆರವೇರಲಿದೆ. ಈ ಕುರಿತು ಅವರ ಕೇರ್‌ಟೇಕರ್ ನವೀನ್ ಮಾಧ್ಯಮಗಳ ಎದುರು ಭಾವುಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. “ಹೈದರಾಬಾದ್‌ನಲ್ಲಿ ಜಾನಕಮ್ಮನವರ ಮನೆ ಅರಮನೆಯಂತಿತ್ತು. ಆದರೆ, ನನ್ನ ಮೇಲಿನ ಅಪಾರ ಪ್ರೀತಿಯಿಂದ ಅವರು ಮೈಸೂರಿಗೆ ಬರುತ್ತಿದ್ದರು. ಮೈಸೂರಿನ ಮಣ್ಣಿನಲ್ಲೇ ಪ್ರಾಣ ಬಿಡಬೇಕೆಂಬುದು ಅವರ ಕೊನೆಯ ಆಸೆಯಾಗಿತ್ತು” ಎಂದು ನವೀನ್ ಕಣ್ಣೀರಿಟ್ಟಿದ್ದಾರೆ.

ಅಭಿಮಾನಿಯ ಮನೆಯೇ ಆಗಿತ್ತು ಆಸರೆ

ನವೀನ್ ಅವರು 12 ವರ್ಷದ ಬಾಲಕನಾಗಿದ್ದಾಗಿನಿಂದಲೂ ಜಾನಕಮ್ಮನವರ ಪರಮ ಅಭಿಮಾನಿ. ಚೆನ್ನೈನ ಅಭಿರಾಮಿಪುರದಲ್ಲಿ ಇವರ ಮೊದಲ ಭೇಟಿ ನಡೆದಿತ್ತು. 2008 ರಿಂದ ಮೈಸೂರಿನಲ್ಲೇ ನೆಲೆಸಿದ್ದ ಜಾನಕಿಯವರು, ಕಳೆದ ಎರಡು ವರ್ಷಗಳಿಂದ ನವೀನ್ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಅಲ್ಲಿ ಭಾಗ್ಯ ಎಂಬುವವರು ಅವರ ಆರೈಕೆ ಮಾಡುತ್ತಿದ್ದರು. ಜಾನಕಮ್ಮ ಅವರು 2018ರಲ್ಲಿ ಮೈಸೂರಿನಲ್ಲೇ ತಮ್ಮ ಕೊನೆಯ ಸಂಗೀತ ಕಾರ್ಯಕ್ರಮ ನೀಡಿದ್ದರು.

ಆರೋಗ್ಯ ಕ್ಷೀಣತೆ ಮತ್ತು ಕೊನೆಯ ಕ್ಷಣ

ಇತ್ತೀಚೆಗೆ ಕಾಲಿನ ಸೋಂಕಿನಿಂದ ಬಳಲುತ್ತಿದ್ದ ಜಾನಕಮ್ಮನವರಿಗೆ ಆಸ್ಪತ್ರೆ ಎಂದರೆ ಭಯವಿತ್ತು. ಹೀಗಾಗಿ ಮನೆಯಲ್ಲೇ ನರ್ಸ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅವರ ಆರೋಗ್ಯ ತೀರಾ ಹದಗೆಟ್ಟು, ಎದ್ದು ಕುಳಿತುಕೊಳ್ಳಲು ಕಷ್ಟಪಟ್ಟಾಗ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.

ಸಾರ್ವಜನಿಕ ದರ್ಶನ ಮತ್ತು ಅಂತ್ಯಕ್ರಿಯೆ

ಮಹಾವಿಭೂತಿಯ ಪಾರ್ಥಿವ ಶರೀರವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ತದನಂತರ ಬೋಗಾದಿಯ ಕನಿಯನಹುಂಡಿಯಲ್ಲಿರುವ ನವೀನ್ ಅವರ ತೋಟದ ಮನೆಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಲಿದೆ. ಒಬ್ಬ ಕಲಾವಿದೆ ಮತ್ತು ಅಭಿಮಾನಿಯ ನಡುವಿನ ಈ ದೈವಿಕ ಬಾಂಧವ್ಯ ಇಡೀ ಚಿತ್ರರಂಗಕ್ಕೇ ಮಾದರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !