ಹೊಸದಿಗಂತ ವರದಿ, ಶಿವಮೊಗ್ಗ:
ನಮ್ಮಲ್ಲಿನ ಆರು ಅರಿಷಡ್ವರ್ಗಆರೋಗ್ಯ ಇದ್ದಾವಾ? ಅವು ಆರು ನಿಯಂತ್ರಣದಲ್ಲಿ ಇದ್ದರೆ ಮಾತ್ರ ಆರೋಗ್ಯದಿಂದ ಇರಲು ಸಾಧ್ಯ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಸರ್ಜಿ ಮಕ್ಕಳ ಮತ್ತು ತಾಯಂದಿರ ಆಸ್ಪತ್ರೆಯಲ್ಲಿ ಬುಧವಾರ ತಾಯಂದಿರ ಎದೆ ಹಾಲು ಸಂಸ್ಕರಣಾ ಘಟಕ- ಅಮೃತ ಬಿಂದು ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಯಾವುದನ್ನು ಆರೋಗ್ಯ ಅಂತ ಪರಿಗಣಿಸಬೇಕು? ಈಗ ಯಾರೂ ಆರೋಗ್ಯವಂತರಲ್ಲ. ಎಲ್ಲರೂ ಅನಾರೋಗ್ಯವಂತರು. ಬಿದ್ದು ಹೋಗುವ ದೇಹದ ಆರೋಗ್ಯದ ಬಗ್ಗೆ ಮಾತಾಡುವುದು ಅಲ್ಲ. ಕಾಮ, ಕ್ರೋಧ, ಮದ, ಮತ್ಸರಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರು.
ಕ್ಷೀರಂ ಆಯುಷ್ಯಂ ವರ್ಧತಿ ಎನ್ನುತ್ತಾರೆ. ಹಾಲಿಗೆ ಆಯಸ್ಸು ಎಷ್ಟು? ಹನ್ನೆರಡು ಗಂಟೆ. ಹೆಚ್ಚು ಉಪಯೋಗ ಮಾಡಲು ಹಾಲು ಕಾಯಿಸುತ್ತೇವೆ. ನಂತರ ಮೊಸರು ಮಾಡುತ್ತಾರೆ. ಮೊಸರಿಗೆ 24 ಗಂಟೆ ಅಯಸ್ಸು. ಮೊಸರು ಕಡೆದರೆ ಮಜ್ಜಿಗೆ, ಬೆಣ್ಣೆ. ಮಜ್ಜಿಗೆಗೆ 42 ಗಂಟೆ ಆಯಸ್ಸು. ಬೆಣ್ಣೆ ನವನೀತ ಎಂದರು. ಅದಕ್ಕೆ ಒಂದು ವಾರ ಆಯಸ್ಸು. ಅದನ್ನು ತುಪ್ಪ ಮಾಡಿದರು. ಅದಕ್ಕೆ ನೂರು ವರ್ಷ ಆಯಸ್ಸು. ಹಾಲು ಸಂಸ್ಕಾರದಿಂದ ಪರಿವರ್ತನೆ ಆಗುತ್ತದೆ ಎಂದರು.
ತಾಯಿ ಎದೆ ಹಾಲಿನ ಬದಲು ಮಕ್ಕಳಿಗೆ ಬಾಟಲ್ ಹಾಲು ಕೊಡುತ್ತಾರೆ. ಮುಂದೆ ಮಕ್ಕಳು ದೊಡ್ಡವರಾಗಿ ಬಾಟಲ್ ದಾಸರಾಗುತ್ತಿದ್ದಾರೆ. ದೀರ್ಘ ಪರಂಪರೆ ಕೊಡುವುದು ಎದೆ ಹಾಲು. ಮಾತೃ ದೇವೋಭವ ಎನ್ನುತ್ತಾರೆ. ವೀರ ಮಾತೆಯರಿಗೆ ವೀರ ಮಕ್ಕಳು ಹುಟ್ಟುತ್ತಾರೆ. ಎದೆ ಹಾಲು ಕೊಡುವುದು ಪುಣ್ಯ ಕಾರ್ಯ ಎಂದರು.
ವೇದಿಕೆಯಲ್ಲಿ ರೋಟರಿ ರಾಜ್ಯ ಪಾಲರಾದ ಬಿ.ಸಿ.ಗೀತಾ, ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ, ಡಾ.ಧನಂಜಯ ಸರ್ಜಿ, ಡಾ.ಪ್ರಶಾಂತ್, ಡಾ.ಪಿ.ನಾರಾಯಣ, ರವಿ ಕೋಟೋಜಿ ಇನ್ನಿತರರು ಇದ್ದರು. ಡಾ.ಶಾಂತಲಾ ಪ್ರಾರ್ಥಿಸಿ, ರೋಟರಿ ಅಧ್ಯಕ್ಷ ಶಿವರಾಜ್ ಸ್ವಾಗತಿಸಿದರು.