ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವು ದೇಹಕ್ಕೆ ಹೆಚ್ಚು ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಬೆಟ್ಟದ ನೆಲ್ಲಿಕಾಯಿ (Amla) ಸೇವನೆಯು ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಅಮೃತಫಲ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಮೃದ್ಧ ವಿಟಮಿನ್ ಸಿ, ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಮತ್ತು ಹಲವು ಪೋಷಕಾಂಶಗಳಿವೆ. ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚುವುದು ಮಾತ್ರವಲ್ಲ, ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.
ರೋಗನಿರೋಧಕ ಶಕ್ತಿ ವೃದ್ಧಿ
ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹವಾಮಾನ ಬದಲಾವಣೆಯಿಂದ ಬರುವ ಕೆಮ್ಮು, ಶೀತದಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ದೇಹವು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಪಡೆಯುತ್ತದೆ.
ಜೀರ್ಣಕ್ರಿಯೆ ಮತ್ತು ತೂಕ ನಿಯಂತ್ರಣ
ನೆಲ್ಲಿಕಾಯಿ ಕರುಳಿನ ಆರೋಗ್ಯವನ್ನು ಸುಧಾರಿಸಿ ಮಲಬದ್ಧತೆ ನಿವಾರಣೆಗೆ ಸಹಾಯಕ. ಇದಲ್ಲದೆ, ಚಯಾಪಚಯವನ್ನು ವೇಗಗೊಳಿಸುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಫೈಬರ್ ಅಂಶದಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ನಿರ್ವಿಶೀಕರಣ ಪ್ರಕ್ರಿಯೆ ಸುಗಮವಾಗುತ್ತದೆ.
ಚರ್ಮ ಮತ್ತು ಕೂದಲಿನ ಆರೋಗ್ಯ
ಬೆಟ್ಟದ ನೆಲ್ಲಿಕಾಯಿಯಲ್ಲಿರುವ ನೈಸರ್ಗಿಕ ಆಂಟಿಆಕ್ಸಿಡೆಂಟ್‌ಗಳು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಿ, ಯೌವನದಿಂದ ಕಾಪಾಡುತ್ತವೆ. ಸುಕ್ಕು ಕಡಿಮೆ ಮಾಡುತ್ತವೆ. ಜೊತೆಗೆ ಕೂದಲು ಉದುರುವಿಕೆ ನಿಯಂತ್ರಣ, ಬಿಳಿಕೂದಲು ತಡೆಯುವಿಕೆ ಹಾಗೂ ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹೃದಯದ ಆರೈಕೆ
ನೆಲ್ಲಿಕಾಯಿ ಕೆಟ್ಟ ಕೊಲೆಸ್ಟ್ರಾಲ್ (LDL) ಇಳಿಸುವುದಲ್ಲದೆ, ಒಳ್ಳೆಯ ಕೊಲೆಸ್ಟ್ರಾಲ್ (HDL) ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ ಹಾಗೂ ರಕ್ತದೊತ್ತಡ ಸಮತೋಲನದಲ್ಲಿರುತ್ತದೆ.