ಹೊಸದಿಗಂತ, ಬೇಲೂರು:
ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತುವೆ. ನಿತ್ಯ ಮಲೆನಾಡಿಗರು ಆತಂಕದ ಸ್ಥಿತಿಯಲ್ಲಿದ್ದು, ತೋಟದ ಕೆಲಸಕ್ಕೆ ಕೂಲಿ ಕಾರ್ಮಿಕರು ಇಲ್ಲದೆ ಪರಿತಾಪ ಪಡುತ್ತಿದ್ದಾರೆ.
ಶೀಘ್ರವೇ ಸಂಬಂಧ ಪಟ್ಟವರು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಇಲ್ಲವೇ ನಮ್ಮನ್ನೆ ಸರ್ಕಾರ ಸ್ಥಳಾಂತರ ಮಾಡಲಿ ಎಂದು ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಅಶ್ವಥ್ ಬಾಣಸವಳ್ಳಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೌದು, ಕಾಫಿ ಬೆಳೆಗಾರರು ಎಂದರೆ ಸಾಕು ರಾಯಲ್ ಬದುಕು ಎನ್ನುವ ಕಾಲಘಟ್ಟ ಇತ್ತೀಚಿನ ದಿನದಲ್ಲಿ ಮರೆಯಾಗುತ್ತಿದೆ. ಕಾಫಿ ಬೆಳೆಗಾರರಿಗೆ ಕೂಲಿ ಕಾರ್ಮಿಕರ ಸಮಸ್ಯೆ, ಅತಿವೃಷ್ಟಿ-ಅನಾವೃಷ್ಟಿ ಮತ್ತು ವೀಪರೀತ ವೆಚ್ಚದ ನಡುವೆ ನಿತ್ಯ ಕಾಡಾನೆಗಳ ಸಮಸ್ಯೆ ನಿಜಕ್ಕೂ ಶೋಚನೀಯವಾಗಿದೆ.
ಇದ್ದರಿಂದ ಕಾಫಿ ಬೆಳೆಗಾರರು ತತ್ತರಿಸುವ ಮೂಲಕ ವಲಸೆ ಹೋಗುವ ಸ್ಥಿತಿಗೆ ಬಂದಿದ್ದಾರೆ. ಕಳೆದ ಮೂರು ವರ್ಷದಿಂದ ಮಲೆನಾಡಿನಲ್ಲಿ ಕಾಡಾನೆ ಸಮಸ್ಯೆ ತೀವ್ರತೆ ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಂತೂ ಕಾಡಾನೆ ಸಮಸ್ಯೆ ಹೇಳತೀರದು. ಈಗಾಗಲೇ ಸರ್ಕಾರ ಮತ್ತು ಅರಣ್ಯ ಇಲಾಖೆ ಎರಡು ಭಾರಿ ನಡೆಸಿದ ಕಾಡಾನೆ ಕಾರ್ಯಾಚರಣೆ ಕಾಟಾಚಾರದಿಂದ ಕೂಡಿದ್ದು, ಪುನಃ ಮಲೆನಾಡಿನಲ್ಲಿ ಕಾಡಾನೆ ದಾಳಿಗೆ ಜನತೆ ಹೈರಾಣರಾಗಿದ್ದಾರೆ.
ನಮ್ಮ ಜೀವನ ನಿಜಕ್ಕೂ ಕಷ್ಟಕರವಾಗಿದೆ. ರಾತ್ರಿ ವೇಳೆ ಆತಂಕದಲ್ಲಿ ಜೀವನ ಕಳೆಯುವ ಹೀನ ಪರಿಸ್ಥಿತಿ ಬಂದಿದೆ. ಯಾವ ವೇಳೆಯಲ್ಲಿ ಕಾಡಾನೆ ಪ್ರವೇಶ ಮಾಡುತ್ತವೆ ಎಂಬುವುದು ತಿಳಿಯುತ್ತಿಲ್ಲ, ನೆಪ ಮಾತ್ರಕ್ಕೆ ಅರಣ್ಯ ಇಲಾಖೆಯವರು ಕೆಲಸ ಮಾಡುತ್ತಿದ್ದಾರೆ.
ಕಾಫಿ ಕಟಾವುಗೆ ಯಾವ ಕೂಲಿ ಕಾರ್ಮಿಕರು ಬರುತ್ತಿಲ್ಲ, ಇದ್ದರಿಂದ ಫಸಲು ಹಾಳಾಗಿದೆ. ತಂತಿಬೇಲಿ, ನೀರಾವರಿ ಪೈಪ್ಗಳು ಆನೆ ತುಳಿತಕ್ಕೆ ಹಾಳಾಗಿದೆ. ಫಸಲಿಗೆ ಬಂದ ಅಡಿಕೆ, ಬಾಳೆ, ಕಾಫಿ, ಮೆಣಸು ತೋಟದಲ್ಲಿ ಹಾನಿಯಾಗಿದೆ. ಸರ್ಕಾರ ಯಾವುದೇ ಪರಿಹಾರಗಳನ್ನು ನೀಡುತ್ತಿಲ್ಲ, ತಿನ್ನುವ ಭತ್ತ ಮಣ್ಣು ಪಾಲಾಗಿದೆ ನಮಗೆ ಶಾಶ್ವತ ಪರಿಹಾರ ನೀಡಿ ಇಲ್ಲವೇ ಸ್ಥಳಾಂತರ ಮಾಡಿ ಎಂದು ಹೇಳಿದರು.