ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಜನ ಸಮಾಜ ಪಕ್ಷ (BSP)ದಿಂದ ಅಮಾನತುಗೊಂಡಿದ್ಧ ಡ್ಯಾನಿಶ್ ಅಲಿ (Danish Ali) ಬುಧವಾರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುವ ಅಲಿ, ಪಕ್ಷ ವಿರೋಧಿ ಚಟುವಟಿಕೆಗಳ ಕಾರಣದಿಂದ ಬಿಎಸ್‌ಪಿಯಿಂದ ಅಮಾನತುಗೊಂಡ ನಂತರ ಪಕ್ಷ ಬದಲಿಸಿದ್ದಾರೆ.
ಲೋಕಸಭಾ ಸಂಸದ ಡ್ಯಾನಿಶ್ ಅಲಿ ಅವರು ಉತ್ತರ ಪ್ರದೇಶದ ಅಮ್ರೋಹಾ ಅವರ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಿದ್ದರು.
ವರದಿಗಳ ಪ್ರಕಾರ, ಕಾಂಗ್ರೆಸ್, ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರಕ್ಕೆ ಅಲಿಯನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.
ಮಾರ್ಚ್ 14 ರಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ, ಅಲಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುಳಿವು ನೀಡಿದ್ದರು.
ಅಲಿ 2018 ರವರೆಗೆ ದೇವೇಗೌಡರ ಜನತಾ ದಳ(ಎಸ್) ನೊಂದಿಗೆ ಸಂಬಂಧ ಹೊಂದಿದ್ದರು. ಅವರು 2018 ರಲ್ಲಿ ಕರ್ನಾಟಕ ಚುನಾವಣೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು. ಆಗ ಬಿಎಸ್ಪಿ ದೇವೇಗೌಡರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಗೌಡರ ಶಿಫಾರಸಿನ ಮೇರೆಗೆ ಅಲಿ ಅವರನ್ನು ಬಹುಜನ ಸಮಾಜ ಪಕ್ಷದಿಂದ ಅಮ್ರೋಹ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು.
ಟಿಎಂಸಿ ಸದಸ್ಯ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವ ನಿರ್ಧಾರದ ವಿರುದ್ಧ ಪ್ರತಿಭಟಿಸಲು ಇತರ ವಿರೋಧ ಪಕ್ಷದ ಸದಸ್ಯರೊಂದಿಗೆ ಲೋಕಸಭೆಯ ಕಲಾಪದಿಂದ ಹೊರನಡೆದ ದಿನಗಳ ನಂತರ ಬಿಎಸ್‌ಪಿ ಕಳೆದ ವರ್ಷ ಅಲಿ ಅವರನ್ನು “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿದ್ದಕ್ಕಾಗಿ ಪಕ್ಷದಿಂದ ಅಮಾನತುಗೊಳಿಸಿತು.