July 17, 2026
Friday, July 17, 2026
spot_img

ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಆಕ್ರೋಶ; ಶಾಲೆಗಳ ದುರಸ್ತಿಗೆ ಸೂಚನೆ

ಹೊಸದಿಗಂತ ವರದಿ ಚಿತ್ರದುರ್ಗ:

ಸರ್ಕಾರಿ ಶಾಲೆಗಳ ಶೌಚಾಲಯ ಹಾಗೂ ಕಟ್ಟಡಗಳ ಸಮರ್ಪಕ ನಿರ್ವಹಣೆ ಮಾಡದಿದ್ದರೆ ಕಠಿಣ ಕ್ರಮಕೈಕೊಳ್ಳಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಗಳಲ್ಲಿನ ಶೌಚಾಲಯಗಳ ನಿರ್ಮಾಣ, ದುರಸ್ತಿ ಹಾಗೂ ನಿರ್ವಹಣೆ ಕೆಲಸವನ್ನು ಆಣೆಕಟ್ಟು ನಿರ್ಮಿಸುವಷ್ಟೇ ವಿಳಂಬವಾಗಿ ಮಾಡುತ್ತಿರುವುದು ಸರಿಯಲ್ಲ. ಕೇವಲ ಶೌಚಾಲಯ ಸರಿಪಡಿಸಲು ವರ್ಷಗಟ್ಟಲೆ ಕಾಯಬೇಕೇ ಎಂದು ಸಂಸದರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ವಿವಿಧ ಶಾಲೆಗಳು, ವಿವಿಧ ಸ್ಥಳಗಳಲ್ಲಿ ಒಟ್ಟು 3,866 ಶೌಚಾಲಯಗಳಿದ್ದು, ಅವುಗಳ ಪೈಕಿ ಬರೋಬ್ಬರಿ 1,140 ಶೌಚಾಲಯಗಳು ಬಂದ್ ಆಗಿವೆ.  ಶೌಚಾಲಯಗಳ ದುರಸ್ತಿಗೆ ಹಣ ಬಿಡುಗಡೆಯಾಗಿದ್ದರೂ ಇಷ್ಟು ವರ್ಷಗಳ ಕಾಲ ವಿಳಂಬ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ತಾಂತ್ರಿಕ ಕಾರಣಗಳ ಮುಂದಿಟ್ಟುಕೊಂಡು ಮಕ್ಕಳ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸಬೇಡಿ. ಕೂಡಲೇ ಈ ಎಲ್ಲಾ 1,140 ಶೌಚಾಲಯಗಳನ್ನು ಸರಿಪಡಿಸಿ ಬಳಕೆಗೆ ಯೋಗ್ಯವಾಗಿಸಬೇಕು ಎಂದು ತಾಕೀತು ಮಾಡಿದರು.

ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸಮಿತಿಗಳು (ಎಸ್‌ಡಿಎಂಸಿ) ಕೇವಲ ಅಧಿಕಾರ ತೋರಿಸಲು ಇರುವುದಲ್ಲ. ಶಾಲೆಯ ನಿರ್ವಹಣೆಗೆ ಕೈಜೋಡಿಸಬೇಕು. ಅವರು ಶಾಲೆಯ ನಿರ್ವಹಣೆಗೆ ಸಹಾಯ ಮಾಡಲು ಮುಂದಾಗಬೇಕು. ಶಾಲೆಗಳ ಶೈಕ್ಷಣಿಕ ವಾತಾವರಣ ಮತ್ತು ಮೂಲ ಸೌಕರ್ಯ ಸರಿಯಾಗಿರುವುದಂತೆ ನೋಡಿಕೊಳ್ಳುವುದು ಅವರ ಕರ್ತವ್ಯ ಎಂದರು.

ಶಾಲಾ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಪ್ರತಿ ಶಾಲೆ ವರ್ಷಕ್ಕೆ 10 ಸಾವಿರ ಶಾಲಾನುದಾನ ನಿರ್ವಹಣೆಗೆ ನೀಡಲಾಗುತ್ತಿದೆ. ಆದರೆ ಈ ಹಣವನ್ನು ಎಷ್ಟು ಶಾಲೆಗಳ ಮುಖ್ಯ ಶಿಕ್ಷಕರು ಸರಿಯಾಗಿ ಬಳಕೆ ಮಾಡಿದ್ದಾರೆ ಎಂಬುದುದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ:

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಸಂತೋಷ್ ಗುಡಿಮಠ, ರಾಜಶೇಖರ್, ಲಕ್ಷ್ಮಣ, ವೆಂಕಟಲಕ್ಷ್ಮಿ, ಗೋವಿಂದಪ್ಪ, ಭರತ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !