ಹೊಸದಿಗಂತ ವರದಿ,ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಅತೀ ಅವಶ್ಯವಾಗಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಷ್ಟಾನಕ್ಕೆ ಈಗಾಗಲೇ ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಈ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಸಂಸದ ಗೋವಿಂದ ಎಂ.ಕಾರಜೋಳರವರು ದೆಹಲಿಯಲ್ಲಿಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೇವರ್ಗಿ – ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-೧೫೦ ಎ ಚಳ್ಳಕೆರೆ ನಗರದ ಒಳಭಾಗದಲ್ಲಿ ಹಾದು ಹೋಗುತ್ತಿದ್ದು, ಚಳ್ಳಕೆರೆ ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು ೯ ಕಿ.ಮೀ. ಹೆದ್ದಾರಿಯನ್ನು ಒನ್ ಟೈಮ್ ಇಂಪ್ರೂವ್‌ಮೆಂಟ್ ಯೋಜನೆಯಡಿ ಅಭಿವೃದ್ದಿಪಡಿಸುವುದು. ರಾಷ್ಟ್ರೀಯ ಹೆದ್ದಾರಿ-೪೮ ಹಾಗೂ ರಾಷ್ಟ್ರೀಯ ಹೆದ್ದಾರಿ-೧೫೦ ಎ ಹೆದ್ದಾರಿಗಳು ಹಿರಿಯೂರು ನಗರದ ಹೊರಭಾಗದಲ್ಲಿ ಛೇಧಿಸುತ್ತಿದ್ದು, ಇಲ್ಲಿ ಕ್ಲೋವರ್ ಲೀಫ್ ಜಂಕ್ಷನ್ ನಿರ್ಮಾಣ ಮಾಡುವುದು.
ಮೊಳಕಾಲ್ಮೂರು ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದು. ಭಾರತ್ ಮಾಲಾ ಪರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಚಳ್ಳಕೆರೆ – ಹಿರಿಯೂರು ಮಧ್ಯದ ಹೆದ್ದಾರಿಯಲ್ಲಿ ಉದ್ಬವಿಸಿರುವ ಹಲವಾರು ಗ್ರಾಮಗಳ ಸಮಸ್ಯೆ ಪರಿಹರಿಸುವುದು. ರಾಷ್ಟ್ರೀಯ ಹೆದ್ದಾರಿ-೪೮ ರಲ್ಲಿ ಶಿರಾ ತಾಲ್ಲೂಕು ಚಿಕ್ಕನಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿರುವ ಕೆಳಸೇತುವೆಯ ಅವೈಜ್ಞಾನಿಕತೆಯನ್ನು ಸರಿಪಡಿಸುವುದು.
ಹಿರಿಯೂರು ತಾಲ್ಲುಕು ಪಟ್ರೆಹಳ್ಳಿ ಬಳಿ ಕೆಳಸೇತುವೆ ನಿರ್ಮಾಣ ಮಾಡುವುದು. ಶಿರಾ ಪಟ್ಟಣದಲ್ಲಿ ಬಾಕಿ ಉಳಿದಿರುವ ೩.೯೦ ಕಿ.ಮೀ. ಸರ್ವೀಸ್ ರಸ್ತೆಯನ್ನು ಪೂರ್ಣಗೊಳಿಸುವುದು. ರಾಷ್ಟ್ರೀಯ ಹೆದ್ದಾರಿ-೧೭೩ ನ್ನು ಹೊಳಲ್ಕೆರೆ ಪಟ್ಟಣದಿಂದ ದಾವಣಗೆರೆ ತಾಲ್ಲೂಕು ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿ-೪೮ ರವರೆಗೆ ವಿಸ್ತರಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಚಿವರೊಂದಿಗೆ ಸಂಸದರು ಚರ್ಚಿಸಿದರು.
ಈ ಎಲ್ಲಾ ವಿಷಯಗಳು ಈಗಾಗಲೇ ಹೆದ್ದಾರಿ ಸಚಿವಾಲಯದಲ್ಲಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಶೀಘ್ರವಾಗಿ ಈ ಎಲ್ಲಾ ಯೋಜನೆಗಳನ್ನುಆದ್ಯತೆಯ ಮೇರೆಗೆ ಅನುಮೋದನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.