ಹೊಸ ದಿಗಂತ ವರದಿ, ಮೈಸೂರು:
ಸಂಸದ ಪ್ರತಾಪಸಿಂಹ ಭಯೋತ್ಪಾದಕ ಎಂಬ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲ. ಅವರಿಗೆ ತಾಲೀಬಾನ್ ಉಗ್ರರ ವೇಷ ಹಾಕಿದ್ದ ಭಾವಚಿತ್ರ ಪ್ರದರ್ಶನಕ್ಕೂ-ಕಾಂಗ್ರೆಸ್‌ಗೂ ಸಂಬಂಧವಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದರು.
ಭಾನುವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಪ್ರತಾಪಸಿಂಹ ಜನರನ್ನು ಪ್ರಚೋದಿಸುತ್ತಾರೆ ಎಂದು ಟೀಕಿಸುತ್ತೇವೇ ಹೊರತು, ಅವರನ್ನು ಭಯೋತ್ಪಾದಕ ಎಂದಿಲ್ಲ. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಡೆದ ಸಹಿ ಸಂಗ್ರಹ ಪ್ರತಿಭಟನೆಯಲ್ಲಿ ಪ್ರತಾಪಸಿಂಹ ಅವನ್ನು ಬುರ್ಖಾ ಹಾಕಿ, ಕೈಯಲ್ಲಿ ಬಾಂಬ್ ಕೊಟ್ಟು ದೇಶದ್ರೋಹಿ, ಭಯೋತ್ಪಾದಕ ಎಂದೆಲ್ಲಾ ಬರೆಯಲಾಗಿತ್ತು. ಈ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿರೋಧಿ ಎಂದೆಲ್ಲಾ ಬಿಜೆಪಿಯವರು ಅಪ್ರಪಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಎಂದೂ ಮುಸ್ಲಿಂ ವಿರೋಧಿಯಲ್ಲ. ಇದೇ ವಿಚಾರವಾಗಿ ಒಕ್ಕಲಿಗರ ಸಂಘದ ನಿರ್ದೇಶಕರು ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದಾರೆ. ಪ್ರತಿಭಟನೆ ನಡೆಸಿದ ವೇದಿಕೆ ಕೆ.ಎಸ್. ಶಿವರಾಮ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆ ಹಿಂದೆ, ಮುಂದೆ ನಿಂತಿರುತ್ತಾರೆ. ಅವರು ಕಾಂಗ್ರೆಸ್ ಪಕ್ಷದ ಸದಸ್ಯರೂ ಅಲ್ಲ. ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾಪ ಮಾಡಿಲ್ಲ
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹುಬ್ಬಳ್ಳಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಟಿಪ್ಪು ಹೆಸರಿಡುವಂತೆ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ. ಅದು ಪಕ್ಷ ಅಥವಾ ಕಾಂಗ್ರೆಸ್ ಸರ್ಕಾರದ ನಿಲುವಲ್ಲ. ಟಿಪ್ಪು ಮೇಲಿನ ಅಭಿಮಾನದಿಂದ ಹಾಗೆ ಹೇಳಿದರಷ್ಟೇ. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅಥವಾ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರು ಹೇಳಿಲ್ಲ. ಈ ವಿಚಾರವಾಗಿ ಸಂಸದ ಪ್ರತಾಪಸಿಂಹ ರಾಜಕಾರಣ ಮಾಡುತ್ತಿರುವುದು, ಟಿಪ್ಪು ಹೆಸರಿಡಲು ಬಿಡಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಾಮಕರಣ ಮಾಡಬೇಕೆಂದು ಸಿದ್ದರಾಮಯ್ಯನವರು 2015ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಹೆಸರನ್ನು ಇಲ್ಲಿಯ ತನಕ ನಾಮಕರಣ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಕಳೆದ 10 ವರ್ಷಗಳಿಂದ ಸಂಸದರಾಗಿರುವ ಪ್ರತಾಪಸಿಂಹ ಸುಮ್ಮನಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ,ವಕ್ತಾರ ಕೆ. ಮಹೇಶ್, ಸೇವಾದಳದ ಗಿರೀಶ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಹಾಜರಿದ್ದರು