Saturday, October 18, 2025

ಹೊತ್ತಿ ಉರಿದ ಸಂಸದರ ಫ್ಲ್ಯಾಟ್‌ : ಬೆಂಕಿಯ ಕೆನ್ನಾಲಿಗೆಗೆ ಇಡೀ ಮನೆಯೇ ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ ಸಂಸದರ ವಸತಿ ಸಮುಚ್ಚಯದಲ್ಲಿ ಇಂದು ಭಾರಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಂಸತ್ತಿನಿಂದ ಕೇವಲ 200 ಮೀಟರ್ ದೂರದಲ್ಲಿರುವ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಯ ಕೆನ್ನಾಲಿಗೆ ಅಕ್ಕ ಪಕ್ಕದ ಫ್ಲ್ಯಾಟ್‌ಗಳಿಗೂ ವ್ಯಾಪಿಸಿದೆ. ಘಟನೆ ಸಂಭವಿಸುತ್ತಲೇ ಸ್ಥಳಕ್ಕೆ ಆರು ಅಗ್ನಿಶಾಮಕ ದಳದ ವಾಹನಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಮುಂದಾಗಿವೆ.

ಸಾಕಷ್ಟು ಸಮಯದ ಬಳಿಕವೂ ಬೆಂಕಿ ತೀವ್ರಗೊಳ್ಳುತ್ತಿದ್ದ ಕಾರಣ ನಂದಿಸುವ ಕಾರ್ಯಾಚರಣೆ ನಿಧಾನವಾಗಿ ನಡೆಯಿತು. ಪರಿಸ್ಥಿತಿ ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿದ್ದವರನ್ನು ತುರ್ತುವಾಗಿ ಹೊರಗೆ ಸ್ಥಳಾಂತರಿಸಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ವ್ಯಾಪಕವಾಗಿ ಹಬ್ಬಿದ ಪರಿಣಾಮ ಕಟ್ಟಡದ ಕೆಲವು ಭಾಗಗಳು ಸಂಪೂರ್ಣ ಸುಟ್ಟು ಹಾನಿಗೊಳಗಾಗಿವೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಸತತ ಕಾರ್ಯನಿರ್ವಹಿಸುತ್ತಿದ್ದು, ಬೆಂಕಿಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

error: Content is protected !!