ಶ್ರೀಮದ್ ಎಡನೀರು ಮಠಕ್ಕೆ ‘ಗಡಿನಾಡ ಚೇತನ’ ಪ್ರಶಸ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು 2022-23ನೇ ಸಾಲಿನ ಗಡಿನಾಡ ಚೇತನ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ಶ್ರೀಮದ್ ಎಡನೀರು ಮಠವನ್ನು ಆರಿಸಿದೆ. ಅದರಂತೆ ಡಾ.ಕಯ್ಯಾರ ಕಿಞ್ಞಣ್ಣ ರೈ ಹೆಸರಿನ ಪ್ರಶಸ್ತಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಾಗೂ ಕನ್ನಡ ಪರ ಹೋರಾಟಗಳಲ್ಲಿ ಸದಾ ನಿರತವಾಗಿರುವ ಎಡನೀರು ಮಠವನ್ನು ಆಯ್ಕೆ ಮಾಡಲಾಗಿದೆ.

ಭಾಲ್ಕಿಯ ಡಾ.ಚನ್ನಬಸವ ಪಟ್ಟದ ದೇವರು, ಡಾ.ಕಯ್ಯಾರ ಕಿಞ್ಞಣ್ಣ ರೈ ಮತ್ತು ಡಾ.ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಗಡಿನಾಡ ಚೇತನ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಭಾಲ್ಕಿಯ ಡಾ.ಚನ್ನಬಸವ ಪಟ್ಟದ ದೇವರು ಹೆಸರಿನ ಗಡಿನಾಡ ಚೇತನ ಪ್ರಶಸ್ತಿಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಗಡಿನಾಡಿನ ಕನ್ನಡ ಹೋರಾಟಗಾರ ಮತ್ತು ನಿವೃತ್ತ ಕನ್ನಡ ಶಿಕ್ಷಕ ಎಂ.ಎಸ್.ಸಿಂಧೂರ ಅವರನ್ನು ಆರಿಸಲಾಗಿದೆ.

ಕನ್ನಡ ಏಕೀಕರಣ ಹೋರಾಟದ ವೀರಾಗ್ರಣಿ ಡಾ.ಜಯದೇವಿ ತಾಯಿ ಲಿಗಾಡೆ ಹೆಸರಿನ ಪ್ರಶಸ್ತಿಗೆ ಗಡಿನಾಡ ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಳಲ್ಲಿ ಕ್ರಿಯಾಶೀಲರಾಗಿರುವ ಅಶೋಕ ಚಂದರಗಿ ಅವರು ಆಯ್ಕೆಯಾಗಿದ್ದಾರೆ.

ಈ ಮೂರು ಪ್ರಶಸ್ತಿಗಳನ್ನು ಫೆಬ್ರವರಿ 2ರಂದು ಸಂಜೆ 5.30ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ಜರಗುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿಗಳ ಆಯ್ಕೆಗೆ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!