ಹೊಸದಿಗಂತ ವರದಿ,ಮೈಸೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಿಯಮ ಉಲ್ಲಂಸಿ ನಿಯಮಬಾಹಿರವಾಗಿ ೫೦:೫೦ ಅನುಪಾತದಲ್ಲಿ ಅಕ್ರಮವಾಗಿ ಮಂಜೂರಾತಿ ಮಾಡಿಕೊಟ್ಟಿರುವ ನಿವೇಶನಗಳನ್ನು ಕೂಡಲೇ ರದ್ದುಗೊಳಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದರು.
ಭಾನುವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಈ ಹಿಂದೆ ಬಡಾವಣೆ ಅಭಿವೃದ್ಧಿಗೊಳಿಸಿರುವುದಕ್ಕೂ ಹಾಗೂ ಪರಿಹಾರ ನೀಡದೆ ಇರುವ ಜಮೀನಿಗಳ ಪ್ರಕರಣಗಳಿಗೂ ೫೦:೫೦ ಅನುಪಾತದಲ್ಲಿ ಬದಲಿ ನಿವೇಶನ ನೀಡುವ ನಿರ್ಣಯ ಮಾಡಿಕೊಂಡು, ಸರ್ಕಾರದ ಅನುಮೋದನೆ ಪಡೆಯದೇ ನಕಲಿ ದಾಖಲೆ ಸೃಷ್ಟಿಸಿಕೊಂಡು ೨೦೨೦ರಿಂದ ೨೦೨೪ರ ಜುಲೈ ತಿಂಗಳವರಗೆ ಸುಮಾರು ೧೦ ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಮುಡಾದ ಅಧಿಕಾರಿಗಳು ಅಕ್ರಮವಾಗಿ ಕ್ರಯ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಮುಡಾ ಆಯುಕ್ತರಾಗಿ ಕೆಲಸ ಮಾಡಿದ್ದ ಡಿ.ಬಿ.ನಟೇಶ್ ಹಾಗೂ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಕೂಡಲೇ ಸಸ್ಪೆಂಡ್ ಮಾಡಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದೆಮೆ ಹೂಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿರುವುದಾಗಿ ತಿಳಿಸಿದರು.
ಮುಡಾದಲ್ಲಿ ನಿವೇಶನ ಹಂಚಿಕೆಯ ಅಕ್ರಮ ಪ್ರಕರಣಗಳು ಕಳೆದ ಮೂರ್ನಾಲ್ಕು ವರ್ಷದಿಂದಲೂ ಸರ್ಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಯಾರು ಕ್ರಮ ಕೈಗೊಂಡಿಲ್ಲ. ಈ ಅಕ್ರಮ ಕುರಿತು ಮೈಸೂರಿನ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಹಲವಾರು ಪತ್ರ ಬರೆದರೂ ಇಲ್ಲಿವರೆಗೂ ಯಾವ ಅಧಿಕಾರಿಗಳ ಮೇಲೆ ಕ್ರಮ ತಗೆದುಕೊಂಡಿಲ್ಲ. ಮೌನವಾಗಿ ಕುಳಿತಿರುವುದನ್ನು ಗಮನಿಸಿದರೇ, ಮುಖ್ಯಮಂತ್ರಿಯವರ ಪತ್ನಿ ಹೆಸರಿಗೆ ಮಂಜೂರಾಗಿರುವ ೧೪ ನಿವೇಶನಗಳ ಪ್ರಭಾವಕ್ಕೆ ಒಳಗಾಗಿರಬೇಕು ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿದರು.
ಮೈಸೂರಿನಲ್ಲಿ ನಿವೇಶನಕ್ಕಾಗಿ ಕಳೆದ ೩೦ ವರ್ಷಗಳಿಂದಲೂ ಸಾವಿರಾರು ಬಡವರು, ಸೂರು ರಹಿತರು ಕಾಯುತ್ತಾ ಕುಳಿತ್ತಿದ್ದಾರೆ. ಮುಡಾದ ಈ ಅಕ್ರಮ ನಾಡಿನ ಜನತೆಗೆ ವಂಚನೆ ಮಾಡಿದಂತೆ ಆಗಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ವಾರದೊಳಗೆ ಅಕ್ರಮ ಎಸೆಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನೀವು ಕೂಡ ಮುಡಾ ಹಗರಣದ ಅಕ್ರಮದಲ್ಲಿ ಪಾಲುದಾರರಾಗಿದ್ದೀರ ಎಂದು ಪರಿಗಣಿಸಿ ನಿಮ್ಮ ವಿರುದ್ಧವೂ ಕಾನೂನು ಹೋರಾಟ ನಡೆಸುತ್ತೇವೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಎಚ್ಚರಿಕೆ ನೀಡಿದರು.
೫೦:೫೦ ಅನುಪಾತದಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕದಲ್ಲೂ ವಂಚನೆ ಮಾಡಲಾಗಿದೆ. ಈ ಕುರಿತು ಕಂದಾಯ ಇಲಾಖೆಯ ಕಾರ್ಯದರ್ಶಿ ಅವರಿಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗಿರಿಧರ್, ಮಹೇಶ ರಾಜೇ ಅರಸ್, ಮಹೇಶ್ ಇದ್ದರು.