ವಿಧಾನಸಭೆಯಲ್ಲಿ ಮುಡಾ ಜಟಾಪಟಿ: ಚರ್ಚೆಗೆ ಅವಕಾಶ ನೀಡದೆ ರೂಲಿಂಗ್ ನೀಡಿದ ಸ್ಪೀಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆಯಲ್ಲಿ ಮುಡಾ ಅಕ್ರಮ ಪ್ರಕರಣದ ಚರ್ಚೆ ಕುರಿತು ನಿಲುವಳಿ ಮಂಡನೆ ಪ್ರಸ್ತಾಪಕ್ಕೆ ಬಿಜೆಪಿ – ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿದ್ದು, ಆದ್ರೆ , ನಿಲುವಳಿ ತಿರಸ್ಕಾರ ಮಾಡಿ ಸ್ಪೀಕರ್ ಯು.ಟಿ ಖಾದರ್ ರೂಲಿಂಗ್ ನೀಡಿದ್ದಾರೆ.

ತುರ್ತು ವಿಚಾರ ಅಲ್ಲ, ಪ್ರಕರಣದ ತನಿಖೆ ವಿಚಾರಣಾ ಆಯೋಗದಲ್ಲಿದೆ. ಹಾಗಾಗಿ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಇಲ್ಲ, ನಿಯಮ 69ರ ಅಡಿ ಚರ್ಚೆಗೂ ಅವಕಾಶ ಇಲ್ಲ ಎಂದು ಸ್ಪೀಕರ್ ರೂಲಿಂಗ್ ಕೊಟ್ಟು ಕಲಾಪ ಮುಂದೂಡಿದರು.

ಇದಕ್ಕೂ‌ ಮುನ್ನ ಕಲಾಪ ಆರಂಭವಾಗುತ್ತಿದಂತೆ ನಿಲುವಳಿ ಪ್ರಸ್ತಾಪಕ್ಕೆ ಬಿಜೆಪಿ ಆಗ್ರಹಿಸಿತು. ಆದರೆ ಪ್ರಶ್ನೋತ್ತರ ಕಲಾಪದ ಬಳಿಕ‌ ನಿರ್ಣಯ ತೆಗೆದುಕೊಳ್ಳುವುದಾಗಿ ಸ್ಪೀಕರ್ ಭರವಸೆ ನೀಡಿದರು. ಆಗ ಸದನದಲ್ಲಿ ವಾಕ್ಸಮರವೇ ನಡೆಯಿತು. ಮುಖ್ಯಮಂತ್ರಿಗಳೇ ಇದರಲ್ಲಿ ನೇರ ಪಾಲುದಾರರು ಇದ್ದಾರೆ, ಚರ್ಚೆ ಆಗಬೇಕು ಎಂದು ಆರ್‌‌.ಅಶೋಕ್ ಆಗ್ರಹಿಸಿದರೆ, ರಾಜ್ಯದ ಜನರೇ ನೋಡ್ತಿದ್ದಾರೆ, ಸಿಎಂ ಮೇಲೆಯೇ ಆರೋಪ ಇರೋದ್ರಿಂದ ಚರ್ಚೆಗೆ ತಗೊಳ್ಳಿ ಅಂತ ಅಶ್ವಥ್ ನಾರಾಯಣ್ ಒತ್ತಾಯಿಸಿದರು. ಆಗ ಸಚಿವ ಬೈರತಿ ಸುರೇಶ್ ಆಕ್ರೋಶ ಹೊರಹಾಕಿ, ಮುಡಾದಲ್ಲಿ ನಿಮ್ಮದು ಭ್ರಷ್ಟಾಚಾರ ಇದೆ, ಚರ್ಚೆಗೆ ಕೊಡಿ‌. ನನ್ನ ಹತ್ರನೂ ದಾಖಲೆ ಇದೆ. ಇಲ್ಲಿ ಕುಳಿತಿರುವ ಮಹಾನುಭಾವರದ್ದು ಇದೆ, ಬರೀ ಒಬ್ಬರದ್ದೇ ಹೇಳೋದು ಅಲ್ಲ, ನಮಗೂ ಅವಕಾಶ ಕೊಡಿ, ನಾವು ಚರ್ಚೆ ಮಾಡ್ತೀವಿ ಎಂದು ಸುರೇಶ್ ಹೇಳಿದರ.

ಈ ವೇಳೆ ಎಲ್ಲರದ್ದೂ ಬಯಲಿಗೆ ಬರಲಿ, ರಾಜ್ಯ ಲೂಟಿ ಹೊಡೆದಿರುವ ಎಲ್ಲರ ಹೆಸರು ಹೊರಗೆ ಬರಲಿ, ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ, ಕ್ಲೀನ್ ಆಲ್ ಪಾರ್ಟಿ ಎಂದು ಯತ್ನಾಳ್ ಗುಡುಗಿದರು. ಆಗ ಸದನದಲ್ಲಿ ಮಾತಿನ ಚಕಮಕಿ, ಗದ್ದಲ ಉಂಟಾಯಿತು.

ಸರ್ಕಾರದ ಪರವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಹೆಚ್‌.ಕೆ ಪಾಟೀಲ್, ಸದನದ ನಿಯಮಾನುಸಾರ ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ. ಕಾರ್ಯವಿಧಾನ, ನಡವಳಿಕೆಯಲ್ಲಿ ಅವಕಾಶ ಇಲ್ಲ. ಈಗಾಗಲೇ ನಿವೃತ್ತ ನ್ಯಾಯಾಧೀಶರಾದ P.N ದೇಸಾಯಿ ಏಕಸದಸ್ಯ ಆಯೋಗದಿಂದ ವಿಚಾರಣೆ ನಡೆಯುತ್ತಿದೆ. ಆರು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ಒಪ್ಪಿಸುವ ನಿರೀಕ್ಷೆ ಇದೆ. 2006 ರಿಂದ 2024ರ ವರೆಗೆ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಆಗ್ತಿದೆ. ಹೀಗಾಗಿ ನಿಯಮ 63ರ ಪ್ರಕಾರ ಇದನ್ನು ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿ, ನಿನ್ನೆ ಶಿವಲಿಂಗೇಗೌಡ ಜಾರಿ ನಿರ್ದೇಶನಾಲಯದ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದ್ರಲ್ಲ ಹೇಗೆ ಅನುಮತಿ ಕೊಟ್ರಿ? ಎಂದು ಗುಡುಗಿದರು. ಸದನ ಆರಂಭವಾಗುವ ಹಿಂದಿನ ದಿನ ಸರ್ಕಾರ ‌ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿದೆ. ಅಂದರೆ ಸದನದಲ್ಲಿ ಇದರ ಬಗ್ಗೆ ಚರ್ಚೆ ಆಗಬಾರದೆಂದು ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದೆ ಅಂತ ಶಾಸಕ ಸುರೇಶ್ ಕುಮಾರ್ ಆರೋಪಿಸಿದರು. ನಂತರ ಮುಖ್ಯಮಂತ್ರಿಗಳ ಮನೆಯವರಿಗೆ 14 ಫ್ಲಾಟ್‌ಗಳನ್ನು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು. ಇದಕ್ಕೆ ಕೈ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.

ಅಂತಿಮವಾಗಿ ಸ್ಪೀಕರ್ ಚರ್ಚೆಗೆ ಅವಕಾಶ ಕೊಡದೇ ರೂಲಿಂಗ್ ಕೊಟ್ಟು, ಸದನ ಮುಂದೂಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!