ಹೈಕಮಾಂಡ್​ ಅಂಗಳದಲ್ಲಿ ಮುಡಾ ಹಗರಣ ಕೇಸ್: ಸಿಎಂ ಸಿದ್ದರಾಮಯ್ಯರ ಬೆನ್ನಿಗೆ ನಿಂತ ಕಾಂಗ್ರೆಸ್ ನಾಯಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಡಾ ಹಗರಣ ಸಂಬಂಧ ಕಾಂಗ್ರೆಸ್ ಹೈಕಮಾಂಡ್​ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇತರೆ ರಾಜ್ಯ ನಾಯಕರು, ದೆಹಲಿಗೆ ತೆರಳಿ ಮಾತುಕತೆ ನಡೆಸಿದರು.

ಈ ವೇಳೆ ಪ್ರಸಕ್ತ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್​ ನಾಯಕರ ಮುಂದೆ ವಿವರಿಸಿದ್ದಾರೆ. ಅಲ್ಲದೇ ಮುಡಾ ಹಗರಣದ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸಂಪೂರ್ಣ ವಿವರ ನೀಡಿದ್ದಾರೆ.

ಸಭೆ ಬಳಿಕ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಹೈಕಮಾಂಡ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಹೈಕಮಾಂಡ್​ಗೆ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ರಾಜ್ಯಪಾಲರ ನಡೆ ಅಸಾಂವಿಧಾನಿಕವಾಗಿದೆ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿ, ರಾಜ್ಯಪಾಲರ ಮೂಲಕ ಸರ್ಕಾರವನ್ನು ಅಭದ್ರಗೊಳಿಸುವ ಯತ್ನಿಸಲಾಗುತ್ತಿದೆ. ಇಡೀ ಪಕ್ಷ ಸಿಎಂ ಜೊತೆ ನಿಲ್ಲುತ್ತೆ. ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿದೆ. ಎಲ್ಲಾ ವಿಚಾರಗಳನ್ನು ಹೈಕಮಾಂಡ್‌ಗೆ ಮನದಟ್ಟು ಮಾಡಿದ್ದೇವೆ. ಇದು ಸಿಎಂ ವಿರುದ್ಧದ ದಾಳಿಯಲ್ಲ, ಗ್ಯಾರಂಟಿ ವಿರುದ್ಧದ ದಾಳಿ. ನಾವೆಲ್ಲಾ ಒಟ್ಟಾಗಿ ಸಿಎಂ ಜೊತೆ ಇದ್ದೇವೆ, ಇಡೀ ಪಕ್ಷ ಸಿಎಂ ಜೊತೆಯಿದೆ ಎಂದಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸಚಿವ ರಣದೀಪ್ ಸುರ್ಜೇವಾಲ ಮಾತನಾಡಿ, ಕರ್ನಾಟಕದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಕರ್ನಾಟಕ ಗವರ್ನರ್ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೀತಿದೆ. ಬಿಜೆಪಿ, ಜೆಡಿಎಸ್​ ನಾಯಕರು ಹೇಳಿದಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್​ನ ಎಲ್ಲಾ ನಾಯಕರು ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಇದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ವಿರುದ್ಧ ಕುತಂತ್ರ ನಡೀತಿದೆ. ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ. ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ನಿಲ್ಲುತ್ತೇವೆ. ಹಿಂದುಳಿದ ಸಮುದಾಯದ ನಾಯಕನೆಂಬ ಕಾರಣಕ್ಕೆ ದಾಳಿ ನಡೀತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕ ರಾಜ್ಯಪಾಲರು ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ ಗ್ಯಾರಂಟಿಗಳ ಮೇಲೆ ಬಿಜೆಪಿ ದಾಳಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೀಡುವುದನ್ನು ವಿಪಕ್ಷಗಳು ಸಹಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ಗ್ಯಾರಂಟಿಗಳ ಮೇಲೆ ದಾಳಿ ನಡೆಯುತ್ತಿದೆ. SC, ST, ಒಬಿಸಿ ಸಮುದಾಯಕ್ಕೆ ಗ್ಯಾರಂಟಿ ನೀಡುವುದನ್ನು ಸಹಿಸುತ್ತಿಲ್ಲ. ಇದು ಸಿಎಂ, ಡಿಸಿಎಂ ಮೇಲಿನ ದಾಳಿಯಲ್ಲ, ಗ್ಯಾರಂಟಿಗಳ ಮೇಲಿನ ದಾಳಿ. ಕೇಂದ್ರ ಅಥವಾ ಬಿಜೆಪಿ ಏನೇ ಮಾಡಿದ್ರೂ ಗ್ಯಾರಂಟಿ ಮುಂದುವರಿಸುತ್ತೇವೆ. ಜನತಾ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!