ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿರುವ ಬಿ–ರಿಪೋರ್ಟ್ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ ಆದೇಶ ಪ್ರಕಟಿಸಲು ಸಜ್ಜಾಗಿದೆ. ಈ ತೀರ್ಪು ಸಿಎಂ ಕುಟುಂಬಕ್ಕೆ ನಿರಾಳತೆ ತರುವುದೇ ಅಥವಾ ಹೊಸ ಸಂಕಷ್ಟಕ್ಕೆ ದಾರಿ ಮಾಡಿಕೊಡುವುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.
ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ–ರಿಪೋರ್ಟ್‌ನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಎರಡೂ ಪಾರ್ಟಿಗಳ ವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಾಲಯ ಬಿ–ರಿಪೋರ್ಟ್‌ನ್ನು ಒಪ್ಪಿಕೊಂಡರೆ ಪ್ರಕರಣದಲ್ಲಿ ಕ್ಲೀನ್‌ಚಿಟ್ ದೃಢವಾಗಲಿದೆ. ಆದರೆ, ವರದಿಯನ್ನು ತಿರಸ್ಕರಿಸಿದರೆ ಮುಂದಿನ ತನಿಖೆಗೆ ದಾರಿ ತೆರೆಯಲಿದೆ.
ಡಿಸೆಂಬರ್ 19ರಂದು ನಡೆದ ವಿಚಾರಣೆಯ ವೇಳೆ, ಕೇಸ್ ಡೈರಿ ಸಲ್ಲಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಜೊತೆಗೆ, ಬಿ–ರಿಪೋರ್ಟ್ ಸಂಬಂಧ ಹೆಚ್ಚುವರಿ ವಾದಗಳಿದ್ದರೆ ಸಲ್ಲಿಸುವ ಅವಕಾಶವನ್ನು ದೂರುದಾರ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೀಡಲಾಗಿತ್ತು.
ಈ ಹಿಂದೆ ಲೋಕಾಯುಕ್ತ ತನಿಖೆ ಕುರಿತು ನ್ಯಾಯಾಧೀಶರು ಪ್ರಶ್ನೆ ಎತ್ತಿದಾಗ, ವಿಶೇಷ ಅಭಿಯೋಜಕರು ಅಂತಿಮ ವರದಿ ಸಿದ್ಧವಾಗಿದ್ದು, ಅನುಮತಿ ಕೊರತೆಯಿಂದ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ನೇಹಮಯಿ ಕೃಷ್ಣ, ತನಿಖೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಕೋರ್ಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದರು. ಇದೀಗ ಎಲ್ಲರ ಗಮನ ನ್ಯಾಯಾಲಯದ ಇಂದಿನ ಆದೇಶದತ್ತ ನೆಟ್ಟಿದೆ.

