January17, 2026
Saturday, January 17, 2026
spot_img

ಬಿಎಸ್‌ಎಫ್‌, ಸಿಆರ್‌ಪಿಎಫ್‌ ಬಲ ಹೆಚ್ಚಿಸಿದ ಮುಧೋಳ ತಳಿಯ ಶ್ವಾನ: ಮನ್‌ ಕಿ ಬಾತ್‌ನಲ್ಲಿ ಮೋದಿ ಮೆಚ್ಚುಗೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ಮನ್‌ ಕಿ ಬಾತ್‌ ಕಾರ್ಯಕ್ರಮದ 127ನೇ ಕಂತಿನಲ್ಲಿ ಕರ್ನಾಟಕ ಮೂಲದ ಮುಧೋಳ ತಳಿಯ ಶ್ವಾನದ ಬಗ್ಗೆ ಪ್ರಸ್ತಾವಿಸಿದರು. ಬಿಎಸ್‌ಎಫ್‌ ಮತ್ತು ಸಿಆರ್‌ಪಿಎಫ್‌ ತಮ್ಮ ತಂಡಗಳಲ್ಲಿ ಭಾರತೀಯ ತಳಿಯ ಶ್ವಾನಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದರು.

ಸುಮಾರು 5 ವರ್ಷಗಳ ಹಿಂದೆ ನಾನು ಈ ಕಾರ್ಯಕ್ರಮದಲ್ಲಿ ಭಾರತೀಯ ತಳಿಯ ನಾಯಿಗಳ ಬಗ್ಗೆ ಚರ್ಚಿಸಿದ್ದು ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಭದ್ರತಾ ಪಡೆಗಳು ನಮ್ಮ ಪರಿಸರ ಮತ್ತು ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತಹ ಭಾರತೀಯ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ನಾನು ಒತ್ತಾಯಿಸಿದ್ದೆ. ನಮ್ಮ ಭದ್ರತಾ ಸಂಸ್ಥೆಗಳು ಈ ದಿಕ್ಕಿನಲ್ಲಿ ಶ್ಲಾಘನೀಯ ಪ್ರಯತ್ನಗಳನ್ನು ಮಾಡಿವೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಮ್ಮ ತುಕಡಿಯಲ್ಲಿ ಭಾರತೀಯ ತಳಿಯ ನಾಯಿಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದರು.

ಪ್ರಧಾನ ಮಂತ್ರಿ ಅವರ ಆಶಯದಂತೆ ಬಿಎಸ್ಎಫ್ ಎರಡು ದೇಸಿ ತಳಿಗಳಾದ ಉತ್ತರ ಪ್ರದೇಶದ ರಾಂಪುರ್ ಹೌಂಡ್ ಮತ್ತು ಬಾಗಲಕೋಟೆ ಜಿಲ್ಲೆಯ ಮೂಲದ ಮುಧೋಳ ನಾಯಿಗಳಿಗೆ ತರಬೇತಿ ನೀಡಿ ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಮಧ್ಯ ಪ್ರದೇಶದ ಗ್ವಾಲಿಯರ್‌ನ ತೇಕನ್‌ಪುರದಲ್ಲಿರುವ ಬಿಎಸ್‌ಎಫ್‌ನ ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರದಲ್ಲಿ ಉತ್ತರ ಪ್ರದೇಶದ ರಾಂಪುರ್ ಹೌಂಡ್ ಮತ್ತು ಮುಧೋಳ್ ನಾಯಿಗೀಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಭಾರತೀಯ ತಳಿಯ ನಾಯಿಗಳ ತರಬೇತಿ ಕೈಪಿಡಿಗಳನ್ನು ಅವುಗಳ ವಿಶಿಷ್ಟ ಸಾಮರ್ಥ್ಯಗಳಿಗೆ ಅನುಗುಣವಾಗಿ ಬದಲಾಯಿಸಲಾಗಿದೆ. ಬೆಂಗಳೂರಿನ ಸಿಆರ್‌ಪಿಎಫ್‌ನ ಶ್ವಾನ ಸಾಕಣೆ ಮತ್ತು ತರಬೇತಿ ಶಾಲೆಯಲ್ಲಿ ಮೊಂಗ್ರೆಲ್ಸ್, ಮುಧೋಳ ಹೌಂಡ್ಸ್, ಕೊಂಬೈ ಮತ್ತು ಪಾಂಡಿಕೋನದಂತಹ ಭಾರತೀಯ ತಳಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಉತ್ತರ ಪ್ರದೇಶದ ಲಖನೌನಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಕರ್ತವ್ಯ ಸಭೆಯಲ್ಲಿ ಗಮನ ಸೆಳೆದ ರಿಯಾ ಹೆಸರಿನ ಮುಧೋಳ ನಾಯಿಯ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಎಸ್‌ಎಫ್ ಈಗ ತನ್ನ ನಾಯಿಗಳಿಗೆ ವಿದೇಶಿ ಹೆಸರುಗಳ ಬದಲಿಗೆ ಭಾರತೀಯ ಹೆಸರು ಇಡುವ ಸಂಪ್ರದಾಯವನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.’ನಮ್ಮ ಸ್ಥಳೀಯ ನಾಯಿಗಳು ಅದ್ಭುತ ಸಾಹಸ ಪ್ರದರ್ಶಿಸಿವೆ. ಕಳೆದ ವರ್ಷ ಛತ್ತೀಸ್‌ಗಢದ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಸಿಆರ್‌ಪಿಎಫ್‌ನ ಸ್ಥಳೀಯ ನಾಯಿ 8 ಕಿಲೋ ಗ್ರಾಂಗಳಷ್ಟು ಸ್ಫೋಟಕಗಳನ್ನು ಪತ್ತೆ ಮಾಡಿತು’ ಎಂದು ಅವರು ಹೇಳಿದರು.’ಈ ವಿಚಾರದತ್ತ ಗಮನ ಹರಿಸಿದ ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್‌ ಅನ್ನು ಅಭಿನಂದಿಸುತ್ತೇನೆ’ ಎಂದರು.

Must Read

error: Content is protected !!