ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುರ್ನಾಡು ಮುಡಿಪು ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಸರಣಿ ಸಮಾರಂಭಗಳ ಕೊನೆಯ ಕಾರ್ಯಕ್ರಮವಾದ ಕ್ರೀಡಾಮೃತ ನ.5ರಂದು ಭಾನುವಾರ ಸಂಪನ್ನಗೊಂಡಿತು. ಇದರೊಂದಿಗೆ, ಸಂಜೆ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಭಾರತೀ ಪ್ಲಾಟಿನಂ ಫೆಸ್ಟ್ ಉದ್ಘಾಟಿಸಲಾಯಿತು.
ಕ್ರೀಡಾಮೃತ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಉಳ್ಳಾಲ ತಾಲೂಕು ಪತ್ರಕರ್ತರು, ಮೆಸ್ಕಾಂ ಸಿಬ್ಬಂದಿ, ಸ್ವಸಹಾಯ ಸಂಘಗಳ ಸದಸ್ಯರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಉಳ್ಳಾಲ ತಾಲೂಕು ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಹಳೆ ವಿದ್ಯಾರ್ಥಿ ಪಿ.ನಾರಾಯಣ ಭಟ್ ವಹಿಸಿದ್ದರು. ರಾಷ್ಟ್ರೀಯ ಕ್ರೀಡಾಪಟುಸುನಿಲ್ ರೈ ಕುರ್ನಾಡುಗುತ್ತು ಕ್ರೀಡಾಕೂಟ ಉದ್ಘಾಟಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಇರಾ ಧ್ವಜಾರೋಹಣ ನೆರವೇರಿಸಿದರು.
ಕ.ರಾ.ದೈ.ಶಿ.ಶಿ.ಸಂ. ಮೈಸೂರು ವಿಭಾಗ ಕಾರ್ಯದರ್ಶಿ ತ್ಯಾಗಂ ಹರೇಕಳ ಪ್ರತಿಜ್ಞಾವಿಧಿ ಬೋಧಿಸಿದರು. ಮಂಗಳಗಂಗೋತ್ರಿಯ ವಿ.ವಿ. ಜೀವವಿಜ್ಞಾನ ವಿಭಾಗ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯ್ಕ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ, ಮುಡಿಪು ವಿಶ್ವಕರ್ಮ ಸಂಘದ ಗೌರವಾಧ್ಯಕ್ಷ ಯೋಗೀಶ್ ಆಚಾರ್ಯ, ಉದ್ಯಮಿ ರಂಗನಾಥ ಕೊಂಡೆ, ರಾಷ್ಟ್ರೀಯ ವಾಲಿಬಾಲ್ ಆಟಗಾರ ಲಿಖಿಲ್ ಗಟ್ಟಿ, ಮುಡಿಪು ಸರ್ಕಾರಿ ಪ.ಪೂ.ಕಾಲೇಜ್ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ರಹಿಮಾನ್, ಮತ್ತಿತರರು ವಿವಿಧ ವಿಭಾಗಗಳ ಕ್ರೀಡೆಗಳನ್ನು ಉದ್ಘಾಟಿಸಿದರು. ಉದ್ಯಮಿಗಳಾದ ಶ್ರೀನಾಥ್ ಕೊಂಡೆ ಸಾಕ್ಷಾತ್ ಶೆಟ್ಟಿ, ಶಶಿ ಬಿ., ಬಾಳೆಪುಣಿ ಗ್ರಾ.ಪಂ. ಸದಸ್ಯ ಅಬ್ದುಲ್ ರೆಹ್ಮಾನ್, ಮಹಾಬಲ ಪೂಂಜ, ರಾಮದಾಸ್ ಎಂ.ಆರ್. ಮತ್ತಿತರರು ಉಪಸ್ಥಿತರಿದ್ದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್.ಸ್ವಾಗತಿಸಿದರು. ಹಳೆ ವಿದ್ಯಾರ್ಥಿನಿ ಸುರೇಖಾ ಯಳವಾರ ನಿರೂಪಿಸಿದರು.
ಸಂಜೆ ನಡೆದ ಸಮಾರಂಭದಲ್ಲಿ ಭಾರತಿ ಪ್ಲಾಟಿನಂ ಫೆಸ್ಟ್ ನ್ನು ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉದ್ಘಾಟಿಸಿದರು. ಉದ್ಯಮಿ ಚಂದ್ರಶೇಖರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಪ್ರಗತಿ ಪರ ಕೃಷಿಕರು ಹಾಗೂ ರಕ್ಷಣಾ ದಳದಲ್ಲಿ ಸೇವೆ ಸಲ್ಲಿಸಿದ ನಿಶ್ಚಲ್ ಜಿ.ಶೆಟ್ಟಿ, ಸಿ.ಎನ್.ಶ್ರೀಕಾಂತ್, ಚಂದ್ರಶೇಖರ ಗಟ್ಟಿ, ರಾಜಾರಾಮ ಭಟ್ ಬಲಿಪಗುಳಿ, ಪ್ರಭಾಕರ ಎಂ., ಸಂತೋಷ್ ಕುಲಾಲ್, ಮನೋಜ್ ಕುಮಾರ್ ಗಟ್ಟಿ, ಎ.ಗೋಪಾಲ ಅವರನ್ನು ಸನ್ಮಾನಿಸಲಾಯಿತು.
ಅಮೃತ ಭಾರತಿ ಅಮೃತ ಮಹೋತ್ಸವ ಸಮಾರಂಭ ನ.11 ಹಾಗೂ 12ರಂದು ನಡೆಯಲಿದೆ.