ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಹಾಗೂ ಸಕಲೇಶಪುರ ನಿಲ್ದಾಣದ ನಡುವಿನ ಘಾಟ್ ಪ್ರದೇಶದ ರೈಲು ಮಾರ್ಗದ ಮೂರು ಕಡೆಗಳಲ್ಲಿ ಭೂ ಕುಸಿತ ಸಂಭವಿಸಿ ಹಳಿಯ ಮೇಲೆ ಕುಸಿದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸಲಾಗಿದೆ.ಈ ಮೂಲಕ ಭಾನುವಾರ ರೈಲು ಸಂಚಾರ ಪುನರಾಂಭವಾಗಿದೆ.
ಸಿರಿಬಾಗಿಲು-ಯಡಕುಮಾರಿ ವಿಭಾಗ,ಯಡಕುಮಾರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ಡೋಣಿಗಲ್ ವಿಭಾಗಗಳ ನಡುವಿನ ಮೂರು ಕಡೆ ಭೂಕುಸಿತ ಉಂಟಾಗಿ ಹಳಿಯ ಮೇಲೆ ಬಿದ್ದಿದ್ದ ಮಣ್ಣು, ಬಂಡೆಗಳು, ಮರ ಗಿಡಗಳನ್ನು ತೆರವುಗೊಳಿಸಲಾಯಿತು.
ಕಾರ್ಯಾಚರಣೆ ತಂಡ ಘಟನಾ ಸ್ಥಳಕ್ಕೆ ತೆರಳಿ ತುರ್ತು ದುರಸ್ತಿ ಕಾರ್ಯಾಚರಣೆ ನಡೆಸಿತು. ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್, ಹೆಚ್ಚುವರಿ ಜನರಲ್ ಮ್ಯಾನೇಜರ್ ಕೆ.ಎಸ್. ಜೈನ್ ಮೇಲ್ವಿಚಾರಣೆಯಲ್ಲಿ ದುರಸ್ತಿ ಕಾರ್ಯ ನೆರವೇರಿದೆ.
ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್, ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್, ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಗೂಡ್ಸ್ ರೈಲುಗಳು ತಮ್ಮ ಸಂಚಾರ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.