ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ 2ನೇ ವಾರ್ಷಿಕೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 31ರಂದು ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
2024ರ ಜನವರಿ 22ರಂದು 51 ಇಂಚು ಎತ್ತರದ ಬಾಲಕ ರಾಮನ ವಿಗ್ರಹವನ್ನು ಅಯೋಧ್ಯೆ ರಾಮ ಮಂದರದಲ್ಲಿ ಸ್ಥಾಪಿಸಿ ಪ್ರಾಣ ಪ್ರತಿಷ್ಠೆ ಕೈಗೊಳ್ಳುವ ಮೂಲಕ ಹಿಂದುಗಳ ಶತಮಾನಗಳ ಕನಸು ನನಸುಗೊಳಿಸಲಾಯಿತು.
ಇದೀಗ ಈ ಐತಿಹಾಸಿಕ ಸಮಾರಂಭಕ್ಕೆ 2 ವರ್ಷ ತುಂಬುತ್ತಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 2ನೇ ವಾರ್ಷಿಕೋತ್ಸವ ನೆರವೇರಿಸಲಾಗುತ್ತದೆ.
ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆದಿದ್ದರೂ ಹಿಂದು ಕ್ಯಾಲಂಡರ್ ಪ್ರಕಾರ ಈ ಬಾರಿ ಡಿಸೆಂಬರ್ 31ರಂದು ವಾರ್ಷಿಕೋತ್ಸವ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವ ಈ ವರ್ಷದ ಜನವರಿ 11ರಂದು ನಡೆಯಿತು.
ಹಿಂದು ಕ್ಯಾಲಂಡರ್ ಪ್ರಕಾರ ಆಚರಣೆ
ಹಿಂದು ಕ್ಯಾಲಂಡರ್ ಪ್ರಕಾರ, ರಾಮನ ಪ್ರಾಣ ಪ್ರತಿಷ್ಠೆಯನ್ನು ಪೌಷ ಮಾಸದ ಶುಕ್ಲ ಪಕ್ಷದ ಕೂರ್ಮ ದ್ವಾದಶಿಯಂದು ನೆರವೇರಿಸಲಾಗಿದೆ. ಅದರಂತೆ ವಿಶೇಷ ಈ ದಿನ 2025ರ ಜನವರಿ 11 ಮತ್ತು ಡಿಸೆಂಬರ್ 31ರಂದು ಬಂದಿರುವುದರಿಂದ ಅಂದೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತಿತರರು ಡಿಸೆಂಬರ್ 31ರಂದು ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 27ರಂದೇ ಧಾರ್ಮಿಕ ಆಚರಣೆ ಆರಂಭವಾಗಲಿದೆ. ಧ್ವಜವನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ.
ವಿವಿಧ ಕಾರ್ಯಕ್ರಮ
ಡಿಸೆಂಬರ್ 31ರಂದು ನಡೆಯುವ ಪ್ರತಿಷ್ಠಾ ದ್ವಾದಶಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಅಂಗದ್ ತಿಲಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 27ರಿಂದ 31ರವರೆಗೆ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಮಂಡಲ ಪೂಜೆ ಮತ್ತು ಸಂಗೀತ, ರಾಮಚರಿತಮಾನಸಗಳ ನಿರಂತರ ಪಠಣ,ರಾಮ ಕಥೆ ನಡೆಯಲಿದೆ.
ಹುತಾತ್ಮರಿಗಾಗಿ ಸ್ಮಾರಕ
ಸುಮಾರು 500 ವರ್ಷಗಳ ಕಾಲ ರಾಮ ಮಂದಿರಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡವರಿಗಾಗಿ ಸ್ಮಾರಕ ನಿರ್ಮಿಸುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಘೋಷಿಸಿದೆ. ಶನಿವಾರ (ಡಿಸೆಂಬರ್ 13) ನಡೆದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹುತಾತ್ಮರ ಸ್ಮಾರಕವನ್ನು ದೇವಾಲಯದ ಪಕ್ಕದಲ್ಲಿ ನಿರ್ಮಿಸಲಾಗುವುದು ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ರಾಮ ಮಂದಿರ ಟ್ರಸ್ಟ್‌ನ ಸದಸ್ಯರ ಪ್ರಕಾರ, ಈ ಸ್ಮಾರಕವು ರಾಮ ಜನ್ಮಭೂಮಿ ಚಳುವಳಿಯನ್ನು ತಲೆಮಾರುಗಳಿಂದ ಜೀವಂತವಾಗಿಟ್ಟ ಸಂತರು, ಋಷಿಗಳು, ಕರಸೇವಕರು ಮತ್ತು ಸಾಮಾನ್ಯ ಭಕ್ತರಿಗೆ ಗೌರವ ಸಲ್ಲಿಸುವ ಉದ್ದೇಶ ಹೊಂದಿದೆ.

