ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅತಿದೊಡ್ಡ ಉದ್ಯಮಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರಿಗೆ ಮತ್ತೆ ಎರಡು ಜೀವ ಬೆದರಿಕೆ ಮೇಲ್‌ಗಳು ಬಂದಿವೆ. ಅಲ್ಲದೆ ಹಿಂದಿನ ಇಮೇಲ್ ಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಮತ್ತೆ ಇಮೇಲ್ ಮೂಲಕ ಬೆದರಿಕೆಯೊಡ್ಡಲಾಗಿದೆ ಎಂದು ಎಚ್ಚರಿಸಲಾಗಿದೆ.
ಮುಕೇಶ್ ಅಂಬಾನಿಗೆ ಈ ಮುಂಚೆ ಅಕ್ಟೋಬರ್ 31 ಮತ್ತು ನವೆಂಬರ್ ನಡುವೆ ಎರಡು ಬೆದರಿಕೆ ಇಮೇಲ್‌ಗಳು ಬಂದಿದ್ದವು. ಆ ಮೇಲ್‌ಗಳನ್ನು ನಿರ್ಲಕ್ಷಿಸಿದ್ದಕ್ಕೆ ಬೆದರಿಕೆಯೊಡ್ಡಲಾಗಿದ್ದು, 400 ಕೋಟಿ ರೂಪಾಯಿಗಳ ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಅಪರಿಚಿತ ವ್ಯಕ್ತಿಯಿಂದ 20 ಕೋಟಿ ರೂ. ನೀಡಿ, ಇಲ್ಲದಿದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಮೊದಲ ಇಮೇಲ್ ಬಂದಿತ್ತು. ನಂತರ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಇಲ್ಲಿನ ಗಾಮ್‌ದೇವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಶನಿವಾರ ಕಂಪನಿಗೆ 200 ಕೋಟಿ ರೂಪಾಯಿ ಬೇಡಿಕೆಯ ಇಮೇಲ್ ಬಂದಿದೆ. ನಂತರ ಕಂಪನಿಗೆ ಸೋಮವಾರ ಮೂರನೇ ಇಮೇಲ್ ಬಂದಿದ್ದು, ಅದನ್ನು ಕಳುಹಿಸಿದವರು 400 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದರು.