ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಭಯೋತ್ಪಾದಕ ದಾಳಿ (26/11)ಯ ಪ್ರಮುಖ ಸಂಚುಕೋರ ತಹವ್ವುರ್ ಹುಸೇನ್ ರಾಣಾನ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಆಗಸ್ಟ್ 13ರವರೆಗೆ ವಿಸ್ತರಿಸಿ ಬುಧವಾರ ಆದೇಶಿಸಿದೆ.
ಈ ಹಿಂದೆ ನೀಡಲಾಗಿದ್ದ ಜುಲೈ 9ರ ಅವಧಿ ಇಂದಿಗೆ ಮುಗಿದಿತ್ತು. ಸದ್ಯ ತಿಹಾರ್ ಜೈಲಿನಲ್ಲಿರುವ ರಾಣಾನನ್ನು ವಿಡಿಯೋ ಕಾನ್ಫ್ರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ವಿಶೇಷ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು ಸಂಚುಕೋರನ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದರು.
2011ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಯ ಆಪ್ತನಾಗಿದ್ದ ರಾಣಾ, ಅಂದಿನ ದಾಳಿಗೆ ನೆರವು ನೀಡಿದ ಆರೋಪವಿದೆ. ಅಮೆರಿಕದ ವಶದಲ್ಲಿದ್ದ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಅಂಗೀಕರಿಸಿದ್ದ ಕೋರ್ಟ್ ಆತನನ್ನು ಏಪ್ರಿಲ್ 4ರಂದು ಭಾರತಕ್ಕೆ ಗಡಿಪಾರು ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರಾಣಾ ವಿರುದ್ಧ ಪೂರಕ ಆರೋಪಪಟ್ಟಿಯನ್ನು ಸಲ್ಲಿಸಿದೆ. ನ್ಯಾಯಾಲಯವು ಆಗಸ್ಟ್ 13 ರಂದು ಆರೋಪಪಟ್ಟಿಯನ್ನು ಪರಿಗಣಿಸಲಿದೆ.