ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂಬೈಗೆ ಅವಧಿಗೂ ಮುನ್ನವೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ ಭಾರೀ ಮಳೆಯಾಗಿದೆ.
ಮುಂಬೈನಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ, ಆಚಾರ್ಯ ಅತ್ರೆ ಚೌಕ್ ನಿಲ್ದಾಣದ ಪ್ರವೇಶ/ನಿರ್ಗಮನ ಸ್ಟೆಪ್ ಹಾಗೂ ಎಸ್ಕಲೇಟರ್‌ಗಳ ಮೂಲಕ ನಿಲ್ದಾಣದೊಳಗೆ ಮಳೆ ನೀರು ನುಗ್ಗಿದೆ. ಮೆಟ್ರೋ ನಿಲ್ದಾಣದ ಒಳಗೆ ಹಠಾತ್ ನೀರು ಹರಿದು ಬಂದ ಕಾರಣ ಪ್ರವೇಶ/ನಿರ್ಗಮನ ಮಾರ್ಗದಲ್ಲಿನ ಆರ್‌ಸಿಸಿ ನೀರು ತಡೆಗೋಡೆ ಕುಸಿದು ಈ ಘಟನೆ ಸಂಭವಿಸಿದೆ.
ಮೇ 10ರಿಂದ ಕಾರ್ಯನಿರ್ವಹಿಸುತ್ತಿರುವ ಆಚಾರ್ಯ ಅತ್ರೆ ಚೌಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಆಕ್ವಾಲೈನ್ ಮಳೆ ನೀರಿನಿಂದ ತುಂಬಿದ್ದು, ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣದೊಳಗೆ ನೀರು ಹರಿದು ಬಂದಿದೆ.
ಮುಂಬೈ ಆಕ್ವಾಲೈನ್ 3 ಸೇವಾ ನವೀಕರಣ ಹಾಗೂ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯಿಂದಾಗಿ, ಆಕ್ವಾಲೈನ್ -3ರಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಆಚಾರ್ಯ ಅತ್ರೆ ಚೌಕ್ ಬದಲಿಗೆ ವರ್ಲಿ ನಿಲ್ದಾಣದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ಲಿಮಿಟೆಡ್ (MMRCL) ಅಧಿಕೃತ ಸಾರ್ವಜನಿಕ ಸೂಚನೆಯನ್ನು ಹೊರಡಿಸಿದೆ.