‘ಮಹಾ’ ಮಳೆಗೆ ಮುಂಬೈ ತತ್ತರ: 107 ವರ್ಷಗಳಲ್ಲೇ ದಾಖಲೆಯ ವರ್ಷಧಾರೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ 107 ವರ್ಷಗಳಲ್ಲಿಯೇ ದಾಖಲೆಯ ಪ್ರಮಾಣದ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ಸಾಮಾನ್ಯ ಅವಧಿಗಿಂತ 16 ದಿನ ಮುಂಚಿತವಾಗಿಯೇ ನಗರಕ್ಕೆ ಮುಂಗಾರು ಎಂಟ್ರಿ ಕೊಟ್ಟಿದೆ. ಇದು ಕಳೆದ 75 ವರ್ಷಗಳಲ್ಲಿ ಅತ್ಯಂತ ವೇಗವಾಗಿ ನಗರಕ್ಕೆ ಎಂಟ್ರಿಕೊಟ್ಟ ಮುಂಗಾರು ಆಗಿದೆ.ಮುಂಬೈನ ಕೆಇಎಂ ಆಸ್ಪತ್ರೆಗೆ ನೀರು ನುಗ್ಗಿ, ರಸ್ತೆಗಳೆಲ್ಲಾ ಜಲಾವೃತಗೊಂಡು ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಮುಂಗಾರು ಪ್ರವೇಶದ ಮೊದಲ ದಿನವೇ ಮುಂಬೈ ನಗರಕ್ಕೆ 107 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ. ಇದಕ್ಕೂ ಮುನ್ನ 1918ರಲ್ಲಿ ಅತಿದೊಡ್ಡ ಮಳೆಯಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ದಾಖಲೆಗಳ ಪ್ರಕಾರ, ದಕ್ಷಿಣ ಮುಂಬೈನ ಹಲವಾರು ಭಾಗಗಳಲ್ಲಿ ಭಾನುವಾರ ತಡರಾತ್ರಿಯಿಂದಲೇ ಮಳೆ ಶುರುವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ 200 ಮಿಮೀ ಮಳೆಯಾಗಿದೆ. ಕೊಲಾಬಾ ವೀಕ್ಷಣಾಲಯದಲ್ಲಿ, ಮುಂಬೈ ತನ್ನ ಅತಿ ಹೆಚ್ಚು 295 ಮಿಮೀ ಮಳೆ ದಾಖಲಿಸಿದೆ. 1918ರಲ್ಲಿ 279.4 ಮಿಮೀ ಮಳೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು. ಆದರಿಂದು 107 ವರ್ಷಗಳ ದಾಖಲೆಯನ್ನ ಮುರಿದಿದೆ.

ಮುಂಬೈನಲ್ಲಿ ಮುಂಜಾನೆಯಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಸಬ್ಅರ್ಬನ್ ರೈಲು ಸೇವೆಯಲ್ಲೂ ಕೂಡ ವ್ಯತ್ಯಯವಾಗಿದೆ. ಮುಂದಿನ ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಮುಂಬೈ ಹಾಗೂ ಇತರ ಕೆಲವು ಭಾಗಗಳಿಗೆ ತಲುಪುವ ನಿರೀಕ್ಷೆಯಿದೆ. ಮುಂದಿನ ಮೂರರಿಂದ ನಾಲ್ಕು ಗಂಟೆಗಳಲ್ಲಿ ಮುಂಬೈ ಸೇರಿದಂತೆ ಕೆಲವು ಸ್ಥಳಗಳಲ್ಲಿ ಗಾಳಿಯು ಗಂಟೆಗೆ 50 – 60 ಕಿ.ಮೀ ವೇಗದಲ್ಲಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಹೀಗಾಗಿ ಮುಂಬೈ, ಥಾಣೆ, ರಾಯಗಡ್ ಮತ್ತು ರತ್ನಗಿರಿ ಜಿಲ್ಲೆಗಳಿಗೆ ʻರೆಡ್‌ʼ ಅಲರ್ಟ್‌ ಘೋಷಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!