February 23, 2026
Monday, February 23, 2026
spot_img

ಮುಂಡಗೋಡ | ಸ್ನೇಹಿತರ ಜೊತೆ ಈಜಲು ತೆರಳಿದ್ದ ಬಾಲಕ ನೀರುಪಾಲು

ಹೊಸದಿಗಂತ ವರದಿ,ಮುಂಡಗೋಡ:

ಸ್ನೇಹಿತರ ಜತೆ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಸನವಳ್ಳಿ ಜಲಾಶಯದಲ್ಲಿ ನಡೆದಿದೆ.

ತಾಲೂಕಿನ ಸನವಳ್ಳಿ ಗ್ರಾಮದ ಅಜಯ್ ರಮೇಶ ಕೆರಿಹೊಲದವರ (17) ಮೃತ ಬಾಲಕ.

ಭಾನುವಾರ ಶಾಲೆ ರಜೆ ಇದ್ದ ಕಾರಣ ಸ್ನೇಹಿತರು ಸೇರಿ ಪಟ್ಟಣಕ್ಕೆ ಬಂದು ಮಧ್ಯಾಹ್ನದವರೆಗೂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ ಪಂದ್ಯಾವಳಿ ನೋಡಿ ಸಂಜೆ ನಾಲ್ಕು ಗಂಟೆಗೆ ಸನವಳ್ಳಿ ಗ್ರಾಮಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಆರು ಜನ ಸ್ನೇಹಿತರು ಸನವಳ್ಳಿ ಜಲಾಶಯಕ್ಕೆ ಈಜಲು ತೆರಳಿದ್ದರು. ಈ ವೇಳೆ ಈಜಾಡುತ್ತಿದ್ದಾಗ ಆಕಸ್ಮಿಕವಾಗಿ ಮೃತ ಬಾಲಕ ಅಜಯ್ ನೀರಲ್ಲಿ ಕಾಣೆಯಾಗಿದ್ದ. ಇದರಿಂದ ಆತಂಕಗೊಂಡ ಉಳಿದ ಬಾಲಕರು, ಈ ವಿಷಯವನ್ನು ಗ್ರಾಮದಲ್ಲಿ ಯಾರಿಗೂ ಹೇಳಿರಲಿಲ್ಲ. ರಾತ್ರಿಯಾದರೂ ಮನೆಗೆ ಅಜಯ ವಾಪಸ್ ಬರದೇ ಇದ್ದಾಗ, ಕುಟುಂಬಸ್ಥರು ಉಳಿದ ಬಾಲಕರನ್ನು ವಿಚಾರಿಸಿದ್ದಾಗ ಘಟನೆ ಬೆಳಕಿಗೆ ಬಂದಿದೆ.

ರಾತ್ರಿಯ ನಡೆದ ವಿಷಯವನ್ನು ತಿಳಿದು ಗ್ರಾಮಸ್ಥರು ಜಲಾಶಯ ಹತ್ತಿರ ಬಂದಾಗ ಆತ ತೊಟ್ಟ ಬಟ್ಟೆ ನೋಡಿ ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಬಾಲಕ ನೀರಿನಲ್ಲಿ ಮುಳಗಿರುವುದು ಖಚಿತವಾಗಿದೆ.

ತಕ್ಷಣವೇ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು ರಾತ್ರಿಯೇ ನೀರಿಪಾಲಾದ ಬಾಲಕನಿಗಾಗಿ ಅಗ್ನಿಶಾಮಕದಳವರು ಜಲಾಶಯದಲ್ಲಿ ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಸಿದ್ದರು ಬಾಲಕ ಪತ್ತೆಯಾಗಿರಲಿಲ್ಲ. ಮತ್ತೆ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು, ಗ್ರಾಮಸ್ಥರ ಸಹಕಾರದೊಂದಿಗೆ ಬಾಲಕನ ಶವ ಪತ್ತೆ ಹಚ್ಚಿದ್ದಾರೆ. ಬಾಲಕನ ಶವ ಕಂಡು ಪೋಷಕರು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !