June 1, 2026
Monday, June 1, 2026
spot_img

ಅಮ್ಮ ಬೆಕ್ಕು ಸಾಕೋದು ಬೇಡ ಅಂತ ಹೇಳಿದ್ದೆ ತಪ್ಪಾಯ್ತು: ಮನನೊಂದು ಯುವ ವೈದ್ಯೆ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ಅಲ್ವಾಲ್ ಪ್ರದೇಶದಲ್ಲಿ 23 ವರ್ಷದ ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಕುಟುಂಬದೊಂದಿಗೆ ನಡೆದ ಗಲಾಟೆಗಳಿಂದ ಮನನೊಂದಿದ್ದರೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಮೃತರನ್ನು ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠಾ ಎಂದು ಗುರುತಿಸಲಾಗಿದೆ. ಅವರು ತಾಯಿ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದು, ಇತ್ತೀಚೆಗೆ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಇದೇ ವೇಳೆ ವೈದ್ಯಕೀಯ ಲೈಸೆನ್ಸ್ ಪಡೆಯಲು ಅಗತ್ಯ ಕ್ರಮಗಳನ್ನೂ ಮುಂದುವರೆಸುತ್ತಿದ್ದರು ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಕೆಲ ದಿನಗಳ ಹಿಂದೆ ಪ್ರಿನ್ಸಿ ಮನೆಗೆ ಬೆಕ್ಕನ್ನು ತಂದು ಸಾಕಲು ಆರಂಭಿಸಿದ್ದರು. ಆದರೆ ಅದಾದ ಬಳಿಕ ಅವರಿಗೆ ಶೀತ ಹಾಗೂ ಕೆಮ್ಮು ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ಕುಟುಂಬದವರು ಬೆಕ್ಕನ್ನು ಸಾಕುವುದು ಬೇಡ ಎಂದು ಒತ್ತಾಯಿಸಿದ್ದು, ಇದೇ ವಿಚಾರವಾಗಿ ಮನೆಯಲ್ಲಿ ಪದೇ ಪದೇ ವಾಗ್ವಾದ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ಶುಕ್ರವಾರ ಸಂಜೆ ತಾಯಿ ಮತ್ತು ಅಜ್ಜಿ ಹೊರಗೆ ಹೋಗಿದ್ದ ವೇಳೆ, ಪ್ರಿನ್ಸಿ ತಮ್ಮ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಗೆ ಮರಳಿದ ಕುಟುಂಬಸ್ಥರು ಈ ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಈ ಕುರಿತು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !