ಹೊಸದಿಗಂತ ವರದಿ, ಮುಂಡಗೋಡ:
ತಾಲೂಕಿನ ಪಂಚವಟಿಯ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದ ಮಕ್ಕಳು ಮಧ್ಯಾಹ್ನದ ಊಟ ಸೇವಿಸಿ ಜ್ವರ, ವಾಂತಿ, ಭೇದಿ ಮತ್ತು ಹೊಟ್ಟೆನೋವಿನಿಂದ ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾಲಯದಲ್ಲಿ ಒಟ್ಟು 518 ಮಕ್ಕಳಿದ್ದು, ಫೆಬ್ರುವರಿ 4ರಂದು ಮದ್ಯಾಹ್ನದ ಊಟ ಸೇವಿಸಿದ್ದಾರೆ. 518 ಮಕ್ಕಳಲ್ಲಿ ಒಟ್ಟೂ 60 ಮಕ್ಕಳು ಜ್ವರ ಮತ್ತು 2 ಮಕ್ಕಳು ಭೇದಿಯಿಂದ ಬಳಲುತ್ತಿದ್ದು ಚಿಕಿತ್ಸೆ ನೀಡಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಮಾಹಿತಿ ಪಡೆದ ತಾಲೂಕಾ ಆರೋಗ್ಯಾಧಿಕಾರಿಗಳ ತಂಡ, ವೈದ್ಯಾಧಿಕಾರಿಗಳ ತಂಡ ಪ್ರಾಥಮಿಕ ಆರೋಗ್ಯ ಕೇಂದ್ರ ಮಳಗಿ ಹಾಗೂ R.B.S.K ತಂಡ ವಿದ್ಯಾಲಯಕ್ಕೆ ಭೇಟಿ ನೀಡಿದಾಗ ಜ್ವರ ಮಾತ್ರ 19 ಮಕ್ಕಳು, ಜ್ವರ ಹಾಗೂ ಬೇಧಿ 31 ಮಕ್ಕಳು, ಜ್ವರ ಹಾಗೂ ಹೊಟ್ಟೆನೋವು 10 ಮಕ್ಕಳು, ಜ್ವರ ಹಾಗೂ ವಾಂತಿ 10 ಮಕ್ಕಳು ಸೇರಿ ಒಟ್ಟು 70 ಮಕ್ಕಳಲ್ಲಿ ರೋಗ ಲಕ್ಷಣಗಳು ಕಂಡು ಬಂದು ಅನಾರೋಗ್ಯ ಪೀಡಿತ ಮಕ್ಕಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ.
ಪ್ರಾಂಶುಪಾಲೆ, ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳೊಡನೆ ಸಮಾಲೋಚನೆ ನಡೆಸಿ ಅಡುಗೆ ಮಾದರಿಯನ್ನು ಭೀಫ್ ಫುಡ್ ಅನಾಲಿಸ್ಟ್ ಡಿವಿಜನ್, ಫುಡ್ ಲ್ಯಾಬೋರೆಟರಿ ತಿಲಕವಾಡಿ, ಬೆಳಗಾವಿ ಇವರಿಗೆ ಕಳುಹಿಸಲಾಯಿತು ಹಾಗೂ ನೀರಿನ ಮಾದರಿಯನ್ನು ಸಂಗ್ರಹಿಸಲಾಯಿತು.
ಒಟ್ಟು 78 ವಿದ್ಯಾರ್ಥಿಗಳು ಕಾಯಿಲೆಗಳಿಗೆ ಒಳಪಟ್ಟಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪಾಲಕರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು.



