ಹೊಸ ದಿಗಂತ ವರದಿ, ಚಿತ್ರದುರ್ಗ:
ಮೊಳಕಾಲ್ಮುರು ಪಟ್ಟಣದ ಎನ್.ಎಂ.ಎಸ್. ಬಡಾವಣೆ ನಿವಾಸಿ ಬಿ.ಶಿವಕುಮಾರ್ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಮೊಳಕಾಲ್ಮುರು ತಾಲ್ಲೂಕಿನ ಕರಿಯಪ್ಪನಹಟ್ಟಿಯ ಕೆ.ಚಂದ್ರಣ್ಣ ಹಾಗೂ ಸುದೀಪ ಎಂದು ಗುರುತಿಸಲಾಗಿದೆ.
ಮೊಳಕಾಲ್ಮುರು ಪಟ್ಟಣದ ಎನ್.ಎಂ.ಎಸ್. ಬಡಾವಣೆ ನಿವಾಸಿ ಬಿ.ಶಿವಕುಮಾರ್ ಮಾರ್ಚ್ 1 ರಂದು ತಮ್ಮ ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಕರಿಯಪ್ಪನಹಟ್ಟಿ ಕಡೆಗೆ ಹೋಗುತ್ತಿದ್ದರು. ಹಿಂದೂ ರುದ್ರಭೂಮಿ ಬಳಿ ಯಾರೋ ದುಷ್ಕರ್ಮಿಗಳು ಬಿ.ಶಿವಕುಮಾರ ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ರಸ್ತೆ ಪಕ್ಕದಲ್ಲಿನ ದೊಡ್ಡಚರಂಡಿಯಲ್ಲಿ ಬಿಸಾಡಿ ಹೋಗಿದ್ದರು.
ಕೊಲೆಯಾದ ಬಿ.ಶಿವಕುಮಾರ್ ಅವರ ಪತ್ನಿ ಕರಿಬಸಮ್ಮ ತಮ್ಮ ಗಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೊಲೀಸರು ಮಾ.೯ ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪತ್ತೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಪರಶುರಾಂ ಶ್ಲಾಘಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ