ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಮಾಲ್ದಾರೆ ಲಿಂಗಾಪುರ ಅರಣ್ಯ ಚೆಕ್ ಪೋಸ್ಟ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆಸಿದ ತಪಾಸಣೆಯ ಸಂದರ್ಭದಲ್ಲಿ ಹರಿಯಾಣ ನೋಂದಣಿಯ ಕಾರಿನಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಹರಿಯಾಣ ರಾಜ್ಯದ (HR26 CE9273) ನೋಂದಣಿ ಹೊಂದಿರುವ ಕಾರು ಚೆಕ್ ಪೋಸ್ಟ್‌ನ ಬಳಿ ಬಂದಾಗ, ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅನುಮಾನ ಬಂದಿದೆ. ತಕ್ಷಣ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ, ಅದರೊಳಗೆ ಮಹಿಳೆಯೊಬ್ಬರ ಮೃತದೇಹ ಇರುವುದು ಕಂಡುಬಂದಿದೆ. ತಕ್ಷಣ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಕೊಲೆ ಶಂಕೆ, ತನಿಖೆ ಮುಂದುವರಿಕೆ
ಮೃತ ಮಹಿಳೆಯನ್ನು 45 ವರ್ಷದ ನಾನ್ಕಿದೇವಿ ಎಂದು ಗುರುತಿಸಲಾಗಿದೆ. ಮೂಲತಃ ಹರಿಯಾಣದವರಾದ ಇವರು ತಮ್ಮ ಪತಿಯೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ನಾನ್ಕಿದೇವಿ ಅವರನ್ನು ಕೊಲೆ ಮಾಡಿ, ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.
ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದು ಕೊಲೆಯೋ ಅಥವಾ ಇನ್ನಾವುದೇ ಕಾರಣ ಇದೆಯೇ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

