ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಹತ್ಯೆ: ಗೃಹ ಸಚಿವರ ವಿರುದ್ಧ ನೇಹಾ ತಂದೆ ನಿರಂಜನ ಹಿರೇಮಠ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೇಹಾ ಹತ್ಯೆ ಮಾದರಿಯಲ್ಲಿ ಮತ್ತೊಂದು ಹತ್ಯೆಯಾಗಿದ್ದು, ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬನು ಭೀಕರವಾಗಿ ಹತ್ಯೆಮಾಡಿ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯ ನಿರಂಜನ ಹಿರೇಮಠ (niranjan hiremath) ವಾರ್ಡ್​​ನಲ್ಲಿಯೇ ನಡೆದಿದೆ.

ಹುಬ್ಬಳ್ಳಿ ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿಯನ್ನು ವಿಶ್ವ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಇತ್ತ ಕೊಲೆಯಾದ ಅಂಜಲಿ ಕುಟುಂಬಸ್ಥರನ್ನು ನೇಹಾ ತಂದೆ ನಿರಂಜನ ಹಿರೇಮಠ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಮಗಳು ನೇಹಾ ಕಳೆದುಕೊಂಡ ದುಃಖದಲ್ಲಿದ್ದೇವೆ. ಈಗ ನಮ್ಮ ವಾರ್ಡ್​​ನ ಮಗಳನ್ನು ಕಳೆದುಕೊಂಡಿದ್ದೇವೆ. ಇನ್ನೂ ಎಷ್ಟು ಬಲಿಯಾಗಬೇಕು. ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಹುಬ್ಬಳ್ಳಿಗೆ ದಕ್ಷ ಪೊಲೀಸ್ ಅಧಿಕಾರಿ ಬೇಕು. ಗೃಹ ಇಲಾಖೆ ನಿರ್ಲಕ್ಷ್ಯ ಮಾಡಿದೆ, ನಿಮಗೆ ನಿಭಾಯಿಸಲು ಆಗದೆ ಹೋದರೆ ರಾಜೀನಾಮೆ ಕೊಡಿ ಎಂದು ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಆರೋಪಿಯನ್ನು ಎನ್​ಕೌಂಟರ್ ಮಾಡಬೇಕು. ನೇಹಾ ಕೊಲೆ ಮಾಡಿದ ಆರೋಪಿಯನ್ನು ಎನ್​ಕೌಂಟರ್ ಮಾಡಿದ್ದರೆ ಹೀಗೆ ಆಗುತ್ತಿರಲ್ಲಲ್ಲ ಎಂದು ಹೇಳಿದ್ದಾರೆ.

ಅಂಜಲಿ ಹತ್ಯೆ ಖಂಡಿಸಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ ಮಾಡಲಾಗಿದೆ. ಅಂಜಲಿ ಹತ್ಯೆ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!