ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಜೈನಮುನಿಯೊಬ್ಬರು ಬಸದಿಯಿಂದ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದು, ಭಕ್ತರಲ್ಲಿ ಆತಂಕ ಮೂಡಿತ್ತು. ಇದೀಗ ಜೈನಮುನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಏಕಾಏಕಿ ಕಾಣೆಯಾಗಿದ್ದರು, ಒಂದು ದಿನವಾದರೂ ಮುನಿಗಳು ಕಾಣದೇ ಇರುವ ಕಾರಣ ಆಚಾರ್ಯ ಕಾಮಕುಮಾರ ನಂದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಅನುಮಾನಾಸ್ಪದವಾಗಿದ್ದ ಇಬ್ಬರು ಯುವಕರನ್ನು ಕರೆದು ವಿಚಾರಣೆ ನಡೆಸಿದ ವೇಳೆ ಜೈನಮುನಿಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ. ಈವರೆಗೂ ಜೈನಮುನಿಗಳ ಮೃತದೇಹ ಪತ್ತೆಯಾಗಿಲ್ಲ.
ನಾವೇ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಆದರೆ ಮೃತದೇಹ ಎಲ್ಲಿದೆ ಎನ್ನುವ ಬಗ್ಗೆ ಸಾಕಷ್ಟು ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ. ಒಮ್ಮೆ ಕೊಲೆ ಮಾಡಿ ಕತ್ತರಿಸಿ ಬಾವಿಗೆ ಎಸೆದಿದ್ದೇವೆ ಎಂದು ಹೇಳುತ್ತಿದ್ದು, ಮತ್ತೊಂದು ಶವ ನದಿಯಲ್ಲಿದೆ ಎನ್ನುತ್ತಿದ್ದಾರೆ. ಬಾವಿ ಹಾಗೂ ನದಿ ಎಲ್ಲೆಡೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
15 ವರ್ಷಗಳಿಂದ ಚಿಕ್ಕೋಡಿಯ ಆಶ್ರಮದಲ್ಲಿದ್ದ ಜೈನಮುನಿಗಳು ಅಪಾರ ಭಕ್ತರನ್ನು ಹೊಂದಿದ್ದರು. ಕೋಣೆಯಿಂದ ಏಕಾಏಕಿ ನಾಪತ್ತೆಯಾಗಿದ್ದು, ಮೊಬೈಲ್ ರೂಂನಲ್ಲಿಯೇ ಇದೆ.