ಅಣಬೆ ಎಂದರೆ ಕೇವಲ ಬಾಯಿ ರುಚಿ ಹೆಚ್ಚಿಸುವ ಆಹಾರವಲ್ಲ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಖಜಾನೆಯೇ ಆಗಿದೆ. ನಮ್ಮ ಪ್ಲೇಟಿನಲ್ಲಿ ಅಣಬೆ ಇದ್ದರೆ ಅದು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮಹತ್ತರ ಕೊಡುಗೆ ನೀಡುತ್ತದೆ. ಆಹಾರ ತಜ್ಞರು ಅಣಬೆಯನ್ನು “ಪೋಷಕಾಂಶಗಳ ಶಕ್ತಿ ಕೇಂದ್ರ” ಎಂದು ಕರೆಯೋದು ಸುಮ್ಮನೆಯಲ್ಲ. ದೇಹದ ರೋಗನಿರೋಧಕ ಶಕ್ತಿಯಿಂದ ಹಿಡಿದು ಹೃದಯ ಆರೋಗ್ಯದವರೆಗೆ ಅಣಬೆ ಬಹುಮುಖ ಪ್ರಯೋಜನ ನೀಡಬಲ್ಲದು.
ಪೋಷಕಾಂಶಗಳಲ್ಲಿ ಸಮೃದ್ಧ
ಅಣಬೆಯಲ್ಲಿ ವಿಟಮಿನ್ ಡಿ, ಬಿ-ವಿಟಮಿನ್, ಪೊಟ್ಯಾಸಿಯಮ್ ಸೇರಿದಂತೆ ಹಲವು ಖನಿಜಗಳಿವೆ. ನಿಯಮಿತ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳ ಕೊರತೆ ಪೂರೈಸಲು ಇದು ಸಹಾಯಕ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಅಣಬೆಗಳಲ್ಲಿ ಇರುವ ಬೀಟಾ-ಗ್ಲುಕಾನ್ಸ್ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಸೋಂಕುಗಳನ್ನು ಎದುರಿಸಲು ಸಹಾಯ ಮಾಡುವುದರ ಜೊತೆಗೆ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಸಹ ಅನುಕೂಲಕರ. ದೀರ್ಘಕಾಲದ ಕಾಯಿಲೆಗಳಾದ ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ.
ಹೃದಯ ಆರೋಗ್ಯಕ್ಕೆ ಬೆಂಬಲ
ಅಣಬೆಗಳಲ್ಲಿ ಕೊಲೆಸ್ಟ್ರಾಲ್ ಇಲ್ಲ. ಸೋಡಿಯಂ ಅಂಶ ಕಡಿಮೆ. ಪೊಟ್ಯಾಸಿಯಮ್ ಅಂಶದ ಕಾರಣದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೃದಯವನ್ನು ಆರೋಗ್ಯಕರವಾಗಿಡಲು ಇದು ಒಳ್ಳೆಯ ಆಹಾರ.
ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ
ಅಣಬೆಗಳಲ್ಲಿ ಇರುವ ಪ್ರಿಬಯಾಟಿಕ್ಸ್ ದೇಹದಲ್ಲಿನ ಉತ್ತಮ ಬ್ಯಾಕ್ಟೀರಿಯಾವನ್ನು ಪೋಷಿಸುತ್ತವೆ. ಇದರಿಂದ ಜೀರ್ಣಕ್ರಿಯೆ ಸುಧಾರಣೆ ಹಾಗೂ ಕರುಳಿನ ಆರೋಗ್ಯ ಉತ್ತಮಗೊಳ್ಳುತ್ತದೆ.
ಇತರ ಆರೋಗ್ಯ ಲಾಭಗಳು
ಅಣಬೆ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಸಸ್ಯಾಹಾರಿಗಳಿಗೆ ಇದು ಉತ್ತಮ ಪ್ರೋಟೀನ್ ಮೂಲ. ತಜ್ಞರ ಪ್ರಕಾರ, ಲೈಂಗಿಕ ಸಮಸ್ಯೆ ಅಥವಾ ವೀರ್ಯಾಣು ಸಂಖ್ಯೆ ಕಡಿಮೆ ಇರುವವರು ಸಹ ಅಣಬೆ ಸೇವನೆಯಿಂದ ಪ್ರಯೋಜನ ಪಡೆಯಬಹುದು.
ಅಣಬೆ ನಮ್ಮ ಆಹಾರದಲ್ಲಿ ಕೇವಲ ರುಚಿ ಹೆಚ್ಚಿಸುವ ಪದಾರ್ಥವಲ್ಲ. ಇದು ದೇಹದ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳುವ ನೈಸರ್ಗಿಕ ಔಷಧಿಯಂತೆಯೇ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಆಹಾರದಲ್ಲಿ ಅಣಬೆಯನ್ನು ನಿಯಮಿತವಾಗಿ ಸೇರಿಸಿಕೊಂಡರೆ ದೇಹ ಬಲಿಷ್ಠವಾಗುವುದರ ಜೊತೆಗೆ ಆರೋಗ್ಯಕರ ಜೀವನ ನಡೆಸಲು ಸಹಾಯವಾಗುತ್ತದೆ.