ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸ್ಪೇಸ್‌ಎಕ್ಸ್ ಸಜ್ಜಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಸೌರಶಕ್ತಿ ಚಾಲಿತ ಎಐ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಘೋಷಿಸಿದ್ದಾರೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಸಮಾವೇಶದಲ್ಲಿ ಮೊದಲ ಬಾರಿಗೆ ಭಾಗವಹಿಸಿ ಮಾತನಾಡಿದ ಅವರು, ಬಾಹ್ಯಾಕಾಶವನ್ನು ಭವಿಷ್ಯದ ಅಪಾರ ಶಕ್ತಿಸ್ರೋತವಾಗಿ ಬಳಸಿಕೊಳ್ಳುವ ದೃಷ್ಟಿಕೋನವನ್ನು ವಿವರಿಸಿದರು.
ಬಾಹ್ಯಾಕಾಶದಲ್ಲಿ ಲಭ್ಯವಿರುವ ಶಕ್ತಿಯನ್ನು ವರ್ಷಕ್ಕೆ ನೂರಾರು ಟೆರಾವ್ಯಾಟ್‌ಗಳ ಮಟ್ಟದಲ್ಲಿ ಅಳೆಯಬಹುದಾಗಿದೆ ಎಂದು ಮಸ್ಕ್ ಅಭಿಪ್ರಾಯಪಟ್ಟರು. ಈ ಸಾಮರ್ಥ್ಯವನ್ನು ಬಳಸಿಕೊಂಡು ಸ್ಪೇಸ್‌ಎಕ್ಸ್ ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಮೂಲಕ ಹೊಸ ತಲೆಮಾರಿನ ಉಪಗ್ರಹ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ ಎಂದರು. ಈ ಉಪಗ್ರಹಗಳು ಎಐ ತಂತ್ರಜ್ಞಾನದಿಂದ ಚಾಲಿತವಾಗಿದ್ದು, ಶುದ್ಧ ಸೌರಶಕ್ತಿಯನ್ನೇ ಅವಲಂಬಿಸಲಿದೆ.
ಇದಕ್ಕೂ ಪೂರಕವಾಗಿ, ಅಮೆರಿಕದಲ್ಲಿ ಭಾರೀ ಪ್ರಮಾಣದ ಸೌರಶಕ್ತಿ ಮೂಲಸೌಕರ್ಯ ಯೋಜನೆಯನ್ನು ಆರಂಭಿಸುವ ಉದ್ದೇಶವಿದೆ ಎಂದು ಮಸ್ಕ್ ತಿಳಿಸಿದರು. ಪ್ರತ್ಯೇಕವಾಗಿ ಸುಮಾರು 100 ಗಿಗಾವ್ಯಾಟ್‌ಗಳ ಸೌರಶಕ್ತಿ ಉತ್ಪಾದನೆ ಗುರಿಯಾಗಿದ್ದು, ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸುವ ಆಶಾವಾದವಿದೆ ಎಂದರು.


