ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ನ ಮುಸ್ಲಿಂ ಮುಖಂಡರು ಗುರುವಾರ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ರಾಜೀನಾಮೆ ಬಗ್ಗೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಹೊರತಾಗಿಯೂ ಮುಸ್ಲಿಂ ಮುಖಂಡರು ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ನಗರದ ಬೋಳಾರ ಶಾದಿ ಮಹಲ್‌ನಲ್ಲಿ ಗುರುವಾರ ಜರುಗಿದ ಕಾಂಗ್ರೆಸ್ ನ ಮುಸ್ಲಿಂ ಮುಖಂಡರ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಸಾಮೂಹಿಕರಾಜೀನಾಮೆ ನಿರ್ಧಾರ ಕೈಗೊಂಡರು.
‘‘ಜಿಲ್ಲೆಯ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆ ತೀರ್ಮಾನ ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಅವರು ಗುರುವಾರ ಬೆಳಗ್ಗೆ ಸಂಪರ್ಕಿಸಿ ಸರ್ಕಾರ ದಕ್ಷಿಣ ಕನ್ನಡದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ವಾರದೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎನ್ನುವ ಭರವಸೆ ನೀಡಿದ್ದಾರೆ’’ ಎಂದು ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರು ಹೇಳುತ್ತಿದ್ದಂತೆ ಏಕಾಏಕಿ ಇಡೀ ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಮುಖಂಡರು, ಕಾರ್ಯಕರ್ತರು ಕೆರಳಿದರು.
ರಾಜೀನಾಮೆ ಕೊಡುವುದಿಲ್ಲ ಎಂದು ನೇರವಾಗಿ ಹೇಳಿ. ಸುಮ್ಮನೆ ನಾಟಕ ಮಾಡಬೇಡಿ. ನಿಮ್ಮ ಭಾಷಣ ಕೇಳಲು ನಾವು ಬಂದಿಲ್ಲ. ನಿಮ್ಮ ನಿರ್ಧಾರ ಏನು ಎಂದು ನೇರವಾಗಿ ಹೇಳಿ ಎಂದು ಸಭಾಂಗಣದಲ್ಲಿ ಕುಳಿತ್ತಿದ್ದ ಬಹುತೇಕ ಜನರು ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದರು.
ಶಾಹುಲ್ ಹಮೀದ್ ಅವರು ಬಳಿಕ ಮಾತು ಮುಂದುವರಿಸಲು ಅವಕಾಶವೇ ದೊರೆಯಲಿಲ್ಲ. ಇಡೀ ಸಭಾಂಗಣ ಗದ್ದಲದಿಂದ ತುಂಬಿಹೋಯಿತು. ಕಾಂಗ್ರೆಸ್ ಅಲ್ಲದವರು ಸಭೆಯಲ್ಲಿ ಯಾರಾದರೂ ಇದ್ದರೆ ದಯವಿಟ್ಟು ಹೊರಗೆ ಹೋಗಿ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರವೂಫ್ ಕೆಲವರಿಗೆ ಎಚ್ಚರಿಕೆ ನೀಡಿದರು.
ಗದ್ದಲದ ನಡುವೆಯೇ ಶಾಹುಲ್ ಹಮೀದ್ ಮೊದಲು ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮೊಹಮ್ಮದ್, ಮಾಜಿ ಮೇಯರ್ ಕೆ.ಅಶ್ರಫ್ ಸಹಿತ ಕೆಲವರು ತಾವು ಕೂಡ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ಇನ್ನು ಕೆಲವು ಮುಖಂಡರು ರಾಜೀನಾಮೆ ಪತ್ರವನ್ನು ಸಭೆಗೆ ಪ್ರದರ್ಶಿಸಿದರು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ , ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಬೇಕು. ಕೇವಲ ಉನ್ನತ ಮಟ್ಟದ ಅಧಿಕಾರಿಗಳನ್ನು ಬದಲಾಯಿಸಿದರೆ ಸಾಲದು. ತಳಮಟ್ಟದಿಂದಲೇ ಅಮೂಲಾಗ್ರವಾಗಿ ಬದಲಾವಣೆ ನಡೆಯಬೇಕು. ಪ್ರಚೋದನಕಾರಿ ರೀತಿ ಮಾತನಾಡಿ ಸಮಾಜದ ಶಾಂತಿ ಕದಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ಎಲ್ಲ ಧರ್ಮದ ಜನರು ಸಾಹಾರ್ದತೆಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ರೌಡಿಗಳ ಅಟ್ಟಹಾಸ, ಅಮಾಯಕರ ಹತ್ಯೆ ನಿಲ್ಲಬೇಕು ಎನ್ನುವುದೇ ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.
ಇಡೀ ಪ್ರಕರಣದಲ್ಲಿ ಗೃಹ ಇಲಾಖೆ ವೈಫಲ್ಯ ಕಾಣುತ್ತಿದೆ. ರೌಡಿ ಶೀಟರ್‌ಗಳ ಪಟ್ಟಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಇರುತ್ತದೆ. ಇದಕ್ಕಾಗಿ ಸಂಶೋಧನೆ ನಡೆಸಬೇಕಾಗಿಲ್ಲ. ಒಂದು ಕಾಲದಲ್ಲಿ ರೌಡಿ ಶೀಟರ್‌ಗಳನ್ನು 15 ದಿನಗಳಿಗೊಮ್ಮೆ ಠಾಣೆಗೆ ಕರೆಸಿ ಪರೇಡ್ ನಡೆಸುವ ಸಂಪ್ರದಾಯ ಇತ್ತು. ಆದರೆ ಈಗ ಅಪರೂಪಕ್ಕೆ ಆಗಮಿಸುವ ರೌಡಿ ಶೀಟರ್ ಪೊಲೀಸ್ ಠಾಣೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಅವನಿಗೆ ಅಲ್ಲಿ ರಾಜಾತಿಥ್ಯ ದೊರೆಯುತ್ತಿದೆ ಎಂದು ಅವರು ಹೇಳಿದರು.
ಮುಸ್ಲಿಂ ಕಾಂಗ್ರೆಸ್ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ವಾರದೊಳಗೆ ಎಲ್ಲ ರಾಜೀನಾಮೆ ಪತ್ರಗಳನ್ನು ಸಂಗ್ರಹಿಸಿ ರಾಜ್ಯ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ನಾಸಿರ್ ಲಕ್ಕಿಸ್ಟಾರ್ ಸಹಿತ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.