ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (SM Krishna) ಅವರ ಜೀವನಗಾಥೆ ಆಧಾರಿತ “ನೆಲದ ಸಿರಿ ಕೃತಿ” ಪುಸ್ತಕ ಚಿತ್ರಕಲಾ ಪರಿಷತ್ನಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಮತ್ತು ಎಸ್ಎಂ ಕೃಷ್ಣ ಅವರ ಒಡನಾಟ, ರಾಜಕೀಯ ಹಾದಿ ಬಗ್ಗೆ ಮೆಲುಕು ಹಾಕಿದರು.
ನನ್ನ ಕೃಷ್ಣ ಅವರ ಒಡನಾಟ 35 ವರ್ಷಗಳದ್ದು. ಎಸ್.ಎಂ ಕೃಷ್ಣ ಅವರು ಕಷ್ಟದ ಕಾಲದಲ್ಲಿ ಅಧಿಕಾರ ಹಿಡಿದರು. ಬರ, ಕಾವೇರಿ ವಿವಾದ, ರಾಜ್ ಕುಮಾರ್ ಅಪಹರಣ ಮತ್ತು ಆರ್ಥಿಕ ಸಂಕಷ್ಟ ಕಾಲದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿದರು. ಇದೆಲ್ಲವನ್ನೂ ಮೆಟ್ಟಿ ನಿಂತು ಎಸ್ ಎಂ ಕೃಷ್ಣ ಅವರ ಕಾಲ ಅಂತ ಹೆಸರು ಮಾಡಿದರು ಎಂದು ಹೇಳಿದರು.
ನನಗೂ ಮತ್ತು ಎಸ್ಎಂ ಕೃಷ್ಣ ಅವರಿಗೂ ಅವಧಿ ಪೂರ್ವ ಚುನಾವಣೆ ವಿಚಾರವಾಗಿ ದೊಡ್ಡ ಜಗಳ ಗಲಾಟೆ ಆಗಿತ್ತು. ಈಗ ಬರಗಾಲ ಇದೆ, ನಿಮ್ಮ ಜಾತಕವೂ ಸರಿಯಿಲ್ಲ. ಹೀಗಾಗಿ ಅವಧಿಪೂರ್ವ ಚುನಾವಣೆ ಹೋಗೋದು ಬೇಡ ಅಂತ ನಾನು ಗಲಾಟೆ ಮಾಡಿದೆ. ಆದರೂ ಎಸ್ಎಂ ಕೃಷ್ಣ ಅವರು ಕೇಳಲಿಲ್ಲ. 132 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಅಂತ ಲೆಕ್ಕಾಚಾರ ಹಾಕಿದ್ದರು. ನಾನು ಅಷ್ಟು ಬರಲ್ಲ 72 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಅಂತ ಗಲಾಟೆ ಮಾಡಿದ್ದೆ. ಆದರೂ ಅವರು ನಿರ್ಧಾರ ಮಾಡಿಬಿಟ್ಡಿದ್ದೇನೆ ಅಂತ ಅವಧಿ ಪೂರ್ವ ಚುನಾವಣೆಗೆ ಹೋದರು, ದುರಾದೃಷ್ಟ ನಾವು ಸೋತೆವು ಎಂದು ನೆನಪು ಮಾಡಿಕೊಂಡರು.
ಎಸ್.ಎಂ.ಕೃಷ್ಣ ಅವರು ತಮ್ಮ ಸಚಿವ ಸಂಪುಟದಿಂದ ನನ್ನನ್ನೇ ಕೈಬಿಟ್ಟಿದ್ದರು. ಆಮೇಲೆ ಜಗಳ ಮಾಡಿ ನಾನು ಅವರ ಸಚಿವ ಸಂಪುಟಕ್ಕೆ ಸೇರಿಕೊಂಡೆ. ಧರ್ಮರಾಯನ ಧರ್ಮತ್ವ, ಅರ್ಜುನನ ಗುರಿ, ಕರ್ಣನ ದಾನತ್ವ ಮತ್ತು ಕೃಷ್ಣನ ತಂತ್ರಗಾರಿಕೆ ಎಲ್ಲವೂ ಎಸ್ಎಂ ಕೃಷ್ಣ ಅವರ ಬಳಿ ಇದೆ ಎಂದು ಹಾಡಿಹೊಗಳಿದರು.
ಎಸ್.ಎಂ ಕೃಷ್ಣ ಅವರು ಮೆಟ್ರೋ ಬಗ್ಗೆ ಅಧ್ಯಯನ ಮಾಡಲು ದೆಹಲಿಗೆ ನಮ್ಮನ್ನು ಕಳುಹಿಸಿದ್ದರು. ದೆಹಲಿಯಲ್ಲಿ ಮೆಟ್ರೋ ನೋಡಿದ ಬಳಿಕ ಮಾಜಿ ಸಂಸದ ಅನಂತ್ ಕುಮಾರ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದಿವಿ. ಎಸ್ಎಂ ಕೃಷ್ಣ ಪ್ರಸ್ತಾಪದಿಂದಲೇ ಇವತ್ತು ನಮ್ಮ ಮೆಟ್ರೋ ಬಂದಿದೆ. ನಮ್ಮ ಮೆಟ್ರೋ ರಾಜ್ಯಕ್ಕೆ ಬಂದಿದ್ದರೇ ಎಸ್ಎಂ ಕೃಷ್ಣ ಕಾರಣ ಎಂದರು.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಡದಿಗೆ ತೆಗೆದುಕೊಂಡು ಹೋಗಬೇಕು ಅಂತ ಬಹಳ ಜನ ಪ್ರಯತ್ನಪಟ್ಟರು. ಎಸ್ಎಂ ಕೃಷ್ಣ ಏನು ಮೋಡಿ ಮಾಡಿದರೋ ಏನೋ 4200 ಎಕರೆ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ನೀಡಲಾಯಿತು. ಇಡೀ ದೇಶದಲ್ಲಿ ಬಿಸಿಯೂಟ ಕಾರ್ಯಕ್ರಮ ಚಿಂತನೆ ನಡೆದಿದ್ದರೆ ಅದು ಎಸ್ ಎಂ ಕೃಷ್ಣ ಅವರಿಂದಾಗಿ. ಹೆಣ್ಣು ಮಕ್ಕಳ ಸಾಬಲ್ಯಕ್ಕೆ ಸ್ತ್ರೀ ಶಕ್ತಿ ಕಾರ್ಯಕ್ರಮ ತಂದರು. ಮೊದಲ ಗ್ಲೋಬಲ್ ಇನವೆಸ್ಟರ್ಸ್ ಮೀಟ್ ಮಾಡಿದ್ದು ಎಸ್ಎಂ ಕೃಷ್ಣ ಕಾಲದಲ್ಲೇ. ಎಲ್ಲ ವರ್ಗಕ್ಕೆ ಭೂಮಿ ಯೋಜನೆಯಿಂದ ಅನುಕೂಲ ಆಗಿದೆ ಎಂದು ಹೇಳಿದರು.