ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ವಿರುದ್ಧದ ಟೀಕೆಗಳಿಗೆ ಮತ್ತು ಮಗಳ ಕುರಿತಾದ ಅಸಭ್ಯ ಕಾಮೆಂಟ್‌ಗಳಿಗೆ ಅತ್ಯಂತ ಸಂಯಮದಿಂದಲೇ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಡೆದ ‘ಮಾರ್ಕ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೈರಸಿ ಹಾವಳಿ ಮತ್ತು ಚಿತ್ರದ ಯಶಸ್ಸಿನ ಬಗ್ಗೆ ಮನಬಿಚ್ಚಿ ಮಾತನಾಡಿದರು.
ತಮ್ಮ ಮಗಳ ಕುರಿತಾದ ಕ್ಷುಲ್ಲಕ ಕಾಮೆಂಟ್‌ಗಳ ಬಗ್ಗೆ ಕಿಂಚಿತ್ತೂ ಎದೆಗುಂದದ ಸುದೀಪ್, “ನನ್ನ ಅಥವಾ ನನ್ನ ಮಗಳ ಬಗ್ಗೆ ಅಸಭ್ಯವಾಗಿ ಮಾತನಾಡಿ ಸಮಯ ವ್ಯರ್ಥ ಮಾಡುವವರಿಗಾಗಿ ನಾನು ನನ್ನ ಸಮಯ ಹಾಳು ಮಾಡುವುದಿಲ್ಲ. ಸಾನ್ವಿ ನನಗಿಂತ ಹೆಚ್ಚು ಮಾನಸಿಕವಾಗಿ ಗಟ್ಟಿಯಾಗಿದ್ದಾಳೆ. ನಾನು ಎದುರಿಸಿದ ಸಮಸ್ಯೆಗಳಿಗಿಂತ ಹತ್ತು ಪಟ್ಟು ಹೆಚ್ಚು ಸವಾಲುಗಳನ್ನು ಅವಳು ಎದುರಿಸಬಲ್ಲಳು ಮತ್ತು ನನಗಿಂತ ಎತ್ತರಕ್ಕೆ ಬೆಳೆಯುತ್ತಾಳೆ ಎಂಬ ವಿಶ್ವಾಸ ನನಗಿದೆ,” ಎಂದು ಅಭಿಮಾನದಿಂದ ಹೇಳಿದರು.
ಕೆಲವರು ಆಧಾರರಹಿತವಾಗಿ ಮಾಡುತ್ತಿರುವ ಆರೋಪಗಳ ಬಗ್ಗೆ ಕಿಡಿಕಾರಿದ ಅವರು, “ಯಾರಾದರೂ ನನ್ನ ವಿರುದ್ಧ ಆರೋಪ ಮಾಡಬೇಕಾದರೆ ಸೂಕ್ತ ಪುರಾವೆಗಳೊಂದಿಗೆ ಬರಲಿ. ಅಹಂಕಾರದಿಂದ ಮಾತನಾಡುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಅಂದು ನೋಡಿದ ಸುದೀಪ್‌ಗೂ ಇಂದಿನ ಸುದೀಪ್‌ಗೂ ಬಹಳ ವ್ಯತ್ಯಾಸವಿದೆ,” ಎನ್ನುವ ಮೂಲಕ ತಮ್ಮ ಬದಲಾದ ವ್ಯಕ್ತಿತ್ವದ ಬಗ್ಗೆ ಸುಳಿವು ನೀಡಿದರು.
‘ಮಾರ್ಕ್’ ಸಿನಿಮಾ ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲೇ ಸುಮಾರು 9,000 ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಸುದೀಪ್ ಮಾಹಿತಿ ನೀಡಿದರು. “ಹಿಂದೆ ಪೈರಸಿ ಕದ್ದುಮುಚ್ಚಿ ನಡೆಯುತ್ತಿತ್ತು, ಈಗ ಚಾಲೆಂಜ್ ಹಾಕಿ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಕಠಿಣ ಕಾನೂನು ಕ್ರಮದ ಅಗತ್ಯವಿದೆ. ಈ ಬಾರಿ ನಾವು ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ,” ಎಂದು ಎಚ್ಚರಿಸಿದರು.
ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡುತ್ತಾ, “ಥಿಯೇಟರ್‌ಗಳ ಮುಂದೆ ಪ್ರೇಕ್ಷಕರು ಮಾಡುತ್ತಿರುವ ಸಂಭ್ರಮ ನೋಡಿದರೆ ಖುಷಿಯಾಗುತ್ತದೆ. ಇದು ನನ್ನ ಹುಟ್ಟುಹಬ್ಬದ ಸಂಭ್ರಮವಲ್ಲ, ಪ್ರೇಕ್ಷಕರ ಪ್ರೀತಿ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮುಂದಿನ ವಾರ ಹಂಚಿಕೊಳ್ಳುತ್ತೇನೆ,” ಎಂದರು.

