ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಒಬ್ಬ ಮಗನಾಗಿ ನಮ್ಮ ತಂದೆಯನ್ನು ಚುನಾವಣಾ ರಾಜಕೀಯ ನಿವೃತ್ತಿ ವಿಚಾರದಲ್ಲಿ ಮನವೊಲಿಸುವುದಿಲ್ಲ. ನಮ್ಮ ತಂದೆಗೆ ಈಗ 78 ವರ್ಷ. ಅವರು ಈಗ ವಿಶ್ರಾಂತಿಯಲ್ಲಿರಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಈ ವಯಸ್ಸಿನಲ್ಲಿ ಮತ್ತೆ ಚುನಾವಣೆಗೆ ನಿಲ್ಲಿ ಎಂದು ಮಗನಾಗಿ ಹೇಳಲು ಇಷ್ಟ ಪಡುವುದಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ನನಗೆ ನನ್ನ ತಂದೆಯ ಆರೋಗ್ಯ, ವಿಶ್ರಾಂತಿ ಜೀವನ ಬಹಳ ಮುಖ್ಯ. ಈ ಹಿಂದೆಯೇ ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ಹೇಳಿದ್ದರು. ನನ್ನ ತಂದೆ ಒಂದು ಬಾರಿ ಹೇಳಿದರೆ ಮುಗಿಯಿತು. ಅವರು ಮತ್ತೆ ಆ ವಿಚಾರದಲ್ಲಿ ತಮ್ಮ ನಿರ್ಧಾರ ಬದಲಿಸುವುದಿಲ್ಲ ಎಂದಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರವಾಗಿ ಮಾತನಾಡಿ, ನಾವು ಏನೇ ತಪ್ಪು ಮಾಡಿದ್ದರೂ ಯಾರಿಗೂ ಬಗ್ಗಲ್ಲ ಎಂಬ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇತ್ತು. ಈಗ ವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಏನೇ ಮಾಡಿದರೂ ನಾವು ಅದನ್ನು ಅರಗಿಸಿಕೊಳ್ಳುತ್ತೇವೆ ಎಂಬ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇತ್ತು. ಇನ್ನಾದರೂ ಕೇಂದ್ರ ಸರ್ಕಾರ ಆ ಮನಸ್ಥಿತಿಯನ್ನು ಬಿಡಬೇಕು ಎಂದು ಹೇಳಿದರು. ಕೆಪಿಎಸ್ಸಿ ನೇಮಕಾತಿ ಹಗರಣದ ವಿಚಾರವಾಗಿ ಮಾತನಾಡಿ, ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ. ಅವರನ್ನು ಬದಲಾಯಿಸುವ ಅಧಿಕಾರವೂ ಸರ್ಕಾರಕ್ಕೆ ಇರಲಿಲ್ಲ. ರಾಜ್ಯಪಾಲರ ಮೂಲಕ ಅವರ ವಜಾ ಆಗಿದೆ. ಈಗ ಅಂತಹ ಭ್ರಷ್ಟನ ಪರವಾಗಿ ಬಿಜೆಪಿಯ ಬೆಂಬಲಿತ ವಕೀಲರೇ ಕೋರ್ಟ್ಗೆ ಹೋಗಿದ್ದಾರೆ. ಬಿಜೆಪಿಯದ್ದು ಯಾವಾಗಲೂ ಡಬಲ್ ಸ್ಟ್ಯಾಂಡ್. ಒಂದು ಕಡೆ ಹಗರಣ ಎನ್ನುತ್ತಾರೆ, ಮತ್ತೊಂದು ಕಡೆ ಹಗರಣ ಮಾಡಿದವರ ಪರ ನಿಲ್ಲುತ್ತಾರೆ. ಬಿಜೆಪಿ ಎಲ್ಲ ವಿಚಾರದಲ್ಲೂ ಇದೇ ಮನಸ್ಥಿತಿಯಲ್ಲಿದೆ ಎಂದು ಟೀಕಿಸಿದರು.



