ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ್ ಅವರ ಮೇಲೆ ನಿರ್ಮಾಪಕರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ ಎಂದು ಆರೋಪ ಮಾಡಿದ್ದೂ, ಇದಕ್ಕೆ ಟ್ವೀಟ್ ಮೂಲಕ ಕಿಚ್ಚ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಾಲನ್ನು ಓದಿ. ಇದು ತುಂಬ ಚೆನ್ನಾಗಿದೆ’ ಎಂಬ ಕ್ಯಾಪ್ಷನ್ ಜೊತೆಯಲ್ಲಿ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ‘ಇದು ತಿಳಿದಿರಲಿ: ದುರುಪಯೋಗಕ್ಕೆ ಅಥವಾ ವಂಚನೆಗೆ ನನ್ನ ಒಳ್ಳೆಯತನ ಒಂದು ಸಾಧನ ಅಲ್ಲ. ಸತ್ಯವಾಗಿದ್ದಾಗ ಅದು ಪ್ರಜ್ವಲಿಸುತ್ತದೆ. ದುರಹಂಕಾರದಿಂದ ಅದರ ಕಾಂತಿ ಕಳೆಗುಂದಲು ನಾನು ಬಿಡುವುದಿಲ್ಲ. ವಿನಯದಿಂದಿರಿ, ಸತ್ಯವಂತರಾಗಿರಿ’ ಎಂಬ ಸಾಲನ್ನು ಸುದೀಪ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ರಾಜಿಯಾಗದ ಒಳ್ಳೆಯತನ’ ಎಂದು ಸುದೀಪ್ ಅವರು ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಅದರ ಜೊತೆ #k46 ಹ್ಯಾಶ್ ಟ್ಯಾಗ್ ಕೂಡ ಇದೆ. ಹಾಗಾಗಿ ಇದು ಸಿನಿಮಾಗೆ ಸಂಬಂಧಿಸಿದಂತೆ ಹೇಳಿದ್ದೋ ಅಥವಾ ಯಾವುದಾದರೂ ವ್ಯಕ್ತಿಗೆ ಸಂಬಂಧಿಸಿ ಹೇಳಿದ್ದೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ತಮ್ಮ 46ನೇ ಸಿನಿಮಾದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಅವರು ಈ ರೀತಿ ಟ್ವೀಟ್ ಮಾಡಿರುವುದು ಅಚ್ಚರಿ ಮೂಡಿಸಿದೆ.
ನಿರ್ಮಾಪಕ ಎನ್. ಕುಮಾರ್ ಅವರು ಸುದೀಪ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರು ಅಡ್ವಾನ್ಸ್ ಪಡೆದುಕೊಂಡು ಅನೇಕ ವರ್ಷಗಳು ಕಳೆದಿದ್ದರೂ ಕಾಲ್ಶೀಟ್ ನೀಡುತ್ತಿಲ್ಲ ಎಂದು ಅವರು ದೂರು ನೀಡಿದ್ದಾರೆ. ಇದಕ್ಕೆ ಸುದೀಪ್ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಟ್ವಿಟರ್ನಲ್ಲಿ ಅವರು ಈ ರೀತಿ ಪೋಸ್ಟ್ ಮಾಡಿರುವುದು ಅಚ್ಚರಿ ಮೂಡಿಸಿದೆ.