Saturday, October 4, 2025

ಮೊಬೈಲ್ ನಲ್ಲಿ ಗೇಮ್ಸ್ ಆಡ್ಬೇಡ ಅಂತ ಅಕ್ಕ ಗದರಿದ್ದೇ ತಪ್ಪಾಯ್ತು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಬೈಲ್ ಗೇಮ್ ಆಡುವ ವಿಚಾರವೇ ದೆಹಲಿಯ ಆದರ್ಶ ನಗರದಲ್ಲಿ ನಡೆದ ಒಂದು ದುರಂತಕ್ಕೆ ಕಾರಣವಾಯಿತು. ಅಕ್ಕನ ಗದರಿಕೆಯಿಂದ ಮನನೊಂದು 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತ ಬಾಲಕನನ್ನು ಆದರ್ಶ್ ಎಂದು ಗುರುತಿಸಲಾಗಿದೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆದರ್ಶ್, ಪಾಠಗಳನ್ನು ನಿರ್ಲಕ್ಷಿಸಿ ಗೇಮ್‌ನಲ್ಲಿ ತಲ್ಲೀನನಾಗಿದ್ದನು. ಈ ಹಿನ್ನೆಲೆಯಲ್ಲಿ ಅಕ್ಕನೊಂದಿಗೆ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಅಕ್ಕ ತನ್ನ ತಮ್ಮನನ್ನು ಗದರಿಸಿದ್ದಾಳೆ. ಇದರಿಂದ ಮನನೊಂದು ಬಾಲಕ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ.

ತಕ್ಷಣ ಕುಟುಂಬಸ್ಥರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.