ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಹರ್ಷವರ್ಧನ ಕಿಕ್ಕೇರಿ ಅಮೆರಿಕದ ವಾಷಿಂಗ್ಟನ್ ಬಳಿಯ ನ್ಯೂಕ್ಯಾಸಲ್ನಲ್ಲಿ ತಮ್ಮ ಪತ್ನಿ ಶ್ವೇತಾ ಮತ್ತು 14 ವರ್ಷದ ಮಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಂಗ್ ಕೌಂಟಿ ಪೊಲೀಸರು 911 ಕರೆಗೆ ಸ್ಪಂದಿಸಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಕಿರಿಯ ಮಗ ಘಟನೆ ನಡೆದಾಗ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಆತ ಸಾವಿನ ದವಡೆಯಿಂದ ಬಚಾವಾಗಿದ್ದಾನೆ.
ಕಿಂಗ್ ಕೌಂಟಿ ಶೆರಿಫ್ ವಕ್ತಾರ ಬ್ರಾಂಡಿನ್ ಹಲ್ ಪ್ರತಿಕ್ರಿಯಿಸಿದ್ದು, ಮನೆಯ ಕಿಟಕಿಯಲ್ಲಿ ರಕ್ತದ ಕಲೆಗಳು, ಬೀದಿಯಲ್ಲಿ ಒಂದು ಗುಂಡು ಮತ್ತು ಮೂರು ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಮೈಸೂರಿನಲ್ಲಿರುವ ಕುಟುಂಬದ ಸ್ನೇಹಿತರೊಬ್ಬರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಘಟನೆ ಮೃತ ಹರ್ಷವರ್ಧನ ಅವರ ತಾಯಿ ಗಿರಿಜಾ ಅಮೆರಿಕಕ್ಕೆ ತೆರಳಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯವರಾದ ಹರ್ಷವರ್ಧನ್ ಅವರು ಮೈಸೂರಿನ ಎಸ್ಜೆಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗಕ್ಕೆ ಸೇರಿದ್ದರು. ನಂತರ ರೋಬೊಟಿಕ್ ತಂತ್ರಜ್ಞಾನ ಆಧಾರಿತ ‘ಹೋಲೊವರ್ಲ್ಡ್’ ಹಾಗೂ ‘ಹೋಲೊಸ್ಯೂಟ್’ ಕಂಪೆನಿಗಳನ್ನು ಸ್ಥಾಪಿಸಿದ್ದರು.