ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾಗೆ ಕೆಲವು ತಿಂಗಳ ಮುಂಚೆಯೇ ತಯಾರಿ ಪ್ರಾರಂಭವಾಗುತ್ತದೆ. ಪ್ರತೀ ವರ್ಷ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆಯನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿಯೂ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಕ್ಯಾಂಪ್ಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸುಮಾರು 25 ಗಂಡು ಹಾಗೂ ಹೆಣ್ಣಾನೆಗಳ ಆರೋಗ್ಯ ಪರಿಶೀಲನೆ ಮಾಡಿದ್ದಾರೆ.
2025ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ 11 ದಿನಗಳ ಕಾಲ ಸಾಂಪ್ರದಾಯಿಕ ಹಾಗೂ ವೈಭವೋಪೇತವಾಗಿ ನಡೆಯಲಿದೆ. ದಸರಾ ಹಬ್ಬಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಆಗಸ್ಟ್ 4ರಂದು ಗಜಪಯಣ ಆರಂಭವಾಗಲಿದೆ. ಹೀಗಾಗಿ ಸಿಸಿಎಫ್ ಮಾಲತಿಪ್ರಿಯಾ, ಡಿಸಿಎಫ್ ಪ್ರಭುಗೌಡ, ಅರಣ್ಯ ಇಲಾಖೆಯ ಪಶುವೈದ್ಯರ ತಂಡ ಅಭಿಮನ್ಯು ಆನೆ ಇರುವ ಮತ್ತಿಗೋಡು ಕ್ಯಾಂಪ್, ದೊಡ್ಡ ಹರವೆ, ಭೀಮನಕಟ್ಟೆ, ದುಬಾರೆ, ಬಳ್ಳೆ ಹಾಗೂ ಬಂಡೀಪುರ ಕ್ಯಾಂಪ್ಗಳಿಗೆ ಭೇಟಿ ನೀಡಿದರು. ಬಳಿಕ ಗಜಪಡೆಗಳ ಮಾವುತರಿಂದ ಮಾಹಿತಿ ಪಡೆದುಕೊಂಡರು. ಪಶುವೈದ್ಯಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡ ಆನೆಗಳ ಆರೋಗ್ಯ ತಪಾಸಣೆ ನಡೆಸಿತು.