ಹೊಸದಿಗಂತ ವರದಿ,ಮೈಸೂರು:
ಮೈಸೂರು-ಕುಶಾಲನಗರ ನಡುವಿನ ರೈಲ್ವೆ ಯೋಜನೆಯ ಪ್ರಾಥಮಿಕ ಡಿಪಿಆರ್ ತಯಾರಾಗಿದ್ದು, ಮತ್ತೊಂದು ಸುತ್ತಿನಲ್ಲಿ ಪರಿಶೀಲಿಸಿ ಆಗಸ್ಟ್ ತಿಂಗಳಲ್ಲಿ ಭಾರತೀಯ ರೈಲ್ವೆ ಮಂಡಳಿಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರು-ಕುಶಾಲನಗರ ನಡುವೆ 87 ಕಿ.ಮೀ ಇದ್ದು,ಪ್ರಾಥಮಿಕವಾಗಿ 1854.62 ಕೋಟಿ ರೂ.ವೆಚ್ಚದ ಯೋಜನೆಗೆ ಸರ್ವೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಸರ್ವೆ ನಡೆಸಿದ ಬಳಿಕ ಅಂತಿಮ ಡಿಪಿಆರ್‌ನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗುವುದು. ಅಂತಿಮ ಹಂತದ ಸರ್ವೆ ಕಾರ್ಯ ಮುಗಿದ ಮೇಲೆ ಯೋಜನೆಯ ಅಂದಾಜು ವೆಚ್ಚ ಎರಡು ಸಾವಿರ ಕೋಟಿ ದಾಟಬಹುದು ಎಂದು ತಿಳಿಸಿದರು.
ಮೈಸೂರಿನಿಂದ ಬೆಳಗೊಳ, ಇಲವಾಲ, ಬಿಳಿಕೆರೆ, ಉದ್ದೂರು, ಹುಣಸೂರು,ಸತ್ಯಗೋಳ, ಪಿರಿಯಾಪಟ್ಟಣ, ದೊಡ್ಡಹೊಸೂರು,ಕುಶಾಲನಗರ ಸೇರಿ ಒಂಬತ್ತು ರೈಲ್ವೆ ನಿಲ್ದಾಣಗಳು ಬರಲಿವೆ. ಈಗಾಗಲೇ ಕೇಂದ್ರಸರ್ಕಾರ ಅನುದಾನ ಮೀಸಲಿಟ್ಟಿರುವ ಕಾರಣ ಡಿಪಿಆರ್‌ಗೆ ಅನುಮೋದನೆ ದೊರೆಯುತ್ತಿದ್ದಂತೆ ಭೂ ಸ್ವಾಧೀನ ಕಾರ್ಯ ಆರಂಭವಾಗಲಿದೆ ಎಂದರು.
ಈ ಮಾರ್ಗಕ್ಕೆ 558.8 ಹೆಕ್ಟೇರ್ ಭೂಮಿ ಸ್ವಾಧೀನವಾಗಬೇಕಿದ್ದು, 522.8 ಹೆಕ್ಟೇರ್ ಖಾಸಗಿ, 4.96 ಹೆಕ್ಟೇರ್ ಭೂಮಿ ಗುರುತಿಸಲಾಗಿದೆ. ರಾಜ್ಯಸರ್ಕಾರ ಭೂಮಿ ಸ್ವಾಧೀನ ಮಾಡಿಕೊಡಬೇಕಿದೆ ಎಂದರು.