ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು–ಬೆಣ್ಣೆಗೆರೆ ಸುತ್ತಮುತ್ತ ಕಳೆದ ಹಲವು ವಾರಗಳಿಂದ ಜನರನ್ನು ನಡುಗಿಸಿದ್ದ ನರಹಂತಕ ಹೆಣ್ಣು ಹುಲಿಯ ದಾಳಿಗೆ ಇಂದು ತೆರೆ ಬಿದ್ದಿದೆ. ಗ್ರಾಮಾಂತರ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಹುಲಿಯನ್ನು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿದಿದೆ. ಈ ಹುಲಿಯ ಜೊತೆಗೆ ಅದರ ಎರಡು ಮರಿಗಳೂ ಬೋನಿಗೆ ಸಿಲುಕಿದ್ದು, ಇನ್ನೊಂದು ಮರಿ ಹುಲಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಇಲಾಖೆ ತಿಳಿಸಿದೆ.
ಇತ್ತೀಚೆಗೆ ಈ ಹೆಣ್ಣು ಹುಲಿ ರಾಜಶೇಖರ್ ಎಂಬ ವ್ಯಕ್ತಿಯನ್ನು ದಾಳಿ ಮಾಡಿ ಬಲಿ ಪಡೆದಿದ್ದರಿಂದ ಪ್ರದೇಶದಲ್ಲಿ ಜನರು ರಾತ್ರಿ ಮನೆಬಿಟ್ಟು ಹೊರಗೆ ಬರಲು ಹೆದರುತ್ತಿದ್ದರು. ಕೃಷಿ ಕೆಲಸಗಳು ನಿಂತುಹೋಗುವಷ್ಟರ ಮಟ್ಟಿಗೆ ಜನರ ಆತಂಕ ಹೆಚ್ಚಿತ್ತು.
ಜಾಗೃತ ಗ್ರಾಮಸ್ಥರ ಮಾಹಿತಿಯ ಆಧಾರದಲ್ಲಿ ಅರಣ್ಯ ಇಲಾಖೆ ಡ್ರೋನ್ ದೃಶ್ಯಗಳು ಮತ್ತು ಟ್ರ್ಯಾಕರ್‌ಗಳ ಸಹಾಯದಿಂದ ಹುಲಿಯ ಸಂಚಾರಿ ಮಾರ್ಗವನ್ನು ನಿಖರವಾಗಿ ಗುರುತಿಸಿ ಬೋನು ಅಳವಡಿಸಿತು. ಕೊನೆಗೂ ಕಾರ್ಯಾಚರಣೆಗೆ ಯಶಸ್ಸು ಲಭಿಸಿದ್ದು, ಸೆರೆಸಿಕ್ಕ ತಾಯಿ ಹುಲಿ ಮತ್ತು ಮರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

