March 30, 2026
Monday, March 30, 2026
spot_img

ದಕ್ಷಿಣ ಕನ್ನಡ, ಉಡುಪಿಯಲ್ಲಿ ‘ನಿಗೂಢ’ ವಿಮಾನ ಸಂಚಾರ: ಅಕ್ಷರಶಃ ಕಂಗಾಲಾದ ಕರಾವಳಿಯ ನಾಗರಿಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೆಡೆ ಅಮೆರಿಕಾ-ಇಸ್ರೇಲ್‌ನೊಂದಿಗೆ ಇರಾನ್, ಇನ್ನೊಂದೆಡೆ ಅಫ್ಘಾನಿಸ್ಥಾನ-ಪಾಕಿಸ್ಥಾನ ನಡುವಣ ನಡೆಯುತ್ತಿರುವ ಭೀಕರ ಯುದ್ಧದ ಸನ್ನಿವೇಶ…

ಟೀವಿ, ಸೋಷಿಯಲ್ ಮೀಡಿಯಾಗಳಲ್ಲಿ ಡ್ರೋಣ್ ದಾಳಿ, ಕ್ಷಿಪಣಿ ದಾಳಿ, ಯುದ್ಧ ವಿಮಾನಗಳ ಹಾರಾಟದ ದೃಶ್ಯಾವಳಿ ನೋಡುತ್ತಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನತೆ ಇದ್ದಕ್ಕಿದ್ದಂತೆಯೇ ತಮ್ಮ ತಲೆ ಮೇಲೆ ಅತ್ಯಂತ ಕೆಳಮಟ್ಟದಲ್ಲಿ ವಿಮಾನವೊಂದು ಹಾರಾಟ ನಡೆಸುತ್ತಿರುವುದನ್ನು ಕಂಡು ಮಂಗಳವಾರ ಹೌಹಾರಿದ್ದಾರೆ!

ಕ್ಷಣಕಾಲ ಆತಂಕಗೊಂಡ ಮಂದಿ ಇದ್ದ ಬದ್ದವರಿಗೆಲ್ಲಾ ಫೋನಾಯಿಸಲು ಆರಂಭಿಸಿದರು. ಪರಸ್ಪರ ಚರ್ಚೆ ಶುರುವಾಯಿತು. ಮನೆಯಲ್ಲಿದ್ದವರು ವಿಮಾನ ನೋಡಲು ಹೊರಗಡೆ ಓಡಿ ಬಂದರು. ಎಲ್ಲಾ ಗಲಿಬಿಲಿ… ವಿವಿಧ ಭಾಗದಲ್ಲಿ ನೆಲ ಮಟ್ಟಕ್ಕೆ ಅತೀ ಸಮೀಪದಲ್ಲಿ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಕಂಡು ಜನ ಒಂದು ಬಾರಿ ದಂಗಾಗಿ ಹೋದರು. ತಮ್ಮ ಮೊಬೈಲ್‌ಗಳಲ್ಲಿ ವೀಡಿಯೋ ಸೆರೆ ಹಿಡಿದರು. ಇದೇ ರೀತಿ ವಿಮಾನ ಸುಮಾರು ೧೦ರಿಂದ ೧೫ ಸುತ್ತು ಹಾರಾಟ ನಡೆಸಿತು. ವಿಮಾನ ಕೆಳ ಭಾಗದಲ್ಲಿ ಹಾರಾಟ ಮಾಡುತ್ತಿರುವ ವಿಚಾರವನ್ನು ಪೊಲೀಸರಿಗೆ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಲುಪಿಸಲಾಯಿತು. ಎಲ್ಲೆಡೆಯೂ ವಿಮಾನ ಹಾರಾಟದ್ದೇ ಸುದ್ದಿ. ಕೊನೆಗೂ ಅಧಿಕಾರಿಗಳಿಂದ, ಪೊಲೀಸರು ಇದು ಯುದ್ಧ ಸಂಬಂಧಿ ವಿಮಾನ ಅಲ್ಲ, ಇದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ಮಾಡುತ್ತಿರುವ ವಿಮಾನ ಎಂದು ಸ್ಪಷ್ಟೀಕರಣ ನೀಡಿದ ಬಳಿಕ ಜನರು ನಿಟ್ಟುಸಿರಿಟ್ಟರು.


ವಿಮಾನ ಹಾರಾಟ ನಡೆಸಲಿರುವ ಕುರಿತು ಮುಂಚಿತವಾಗಿ ಮಾಹಿತಿ ನೀಡದೇ ಇದ್ದುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಯಿತು. ಈ ವಿಮಾನ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಹಾರಾಟ ನಡೆಸಿದ್ದು, ಖನಿಜ ಸಂಪತ್ತು, ಭೂಗರ್ಭ ಜಲ ಸಂಪನ್ಮೂಲ, ಚುಂಬಕ ಕ್ಷೇತ್ರದ ಬದಲಾವಣೆಗಳು ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !